ಮಂಗಳೂರು: ಮಾನಸಿಕ ಖಿನ್ನತೆಯಿಂದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಆಸ್ಪತ್ರೆ ಕೊಠಡಿಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ.
ಮಂಜೇಶ್ವರ ಬಳಿಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಮೃತ ಖೈದಿ. 2022ರ ಡಿಸೆಂಬರ್ ನಲ್ಲಿ ನೌಫಾಲ್ ಎನ್ ಡಿಪಿಎಸ್ ಕಾಯ್ದೆಯಡಿ ಕೋಣಾಜೆ ಪೊಲೀಸರಿಂದ ಬಂಧನಕ್ಕೀಡಾಗಿದ್ದ. ಮಂಗಳೂರು ಜೈಲಿನಲ್ಲೇ ಇದ್ದು ಯುವಕನ ಪರವಾಗಿ ಜಾಮೀನು ಕೊಡಿಸುವುದಕ್ಕೂ ಯಾರೂ ಬಂದಿರಲಿಲ್ಲ. ಅತಿಯಾದ ಡ್ರಗ್ಸ್ ಸೇವನೆಯ ಚಟಕ್ಕೆ ಬಿದ್ದವರು ಅದು ಸಿಗದೇ ಇದ್ದಾಗ ಮಾನಸಿಕವಾಗಿ ತೊಂದರೆಗೀಡಾಗುತ್ತಾರೆ. ಜೈಲಿನಲ್ಲಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಕಾರಣಕ್ಕೆ ನೌಫಾಲ್ ನನ್ನು ಚಿಕಿತ್ಸೆಗೆಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಎಪ್ರಿಲ್ 25ರಂದು ಚಿಕಿತ್ಸೆಗೆ ದಾಖಲಾಗಿದ್ದ ನೌಫಾಲ್, ಮೇ 6ರ ಸೋಮವಾರ ನಸುಕಿನ ವೇಳೆ ನಾಲ್ಕು ಗಂಟೆಗೆ ಬೆಡ್ ಶೀಟನ್ನು ಕಿಟಕಿಗೆ ಬಿಗಿದು ನೇಣುಹಾಕಿಕೊಂಡಿದ್ದಾನೆ. ಪೊಲೀಸ್ ಕಾವಲಿನೊಂದಿಗೆ ಇದೇ ಕೊಠಡಿಯಲ್ಲಿ ಬೇರೆ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿರುವುದರ ನಡುವೆ ನೌಫಲ್ ಸಾವಿಗೆ ಶರಣಾಗಿದ್ದಾನೆ. 2022 ರ ಡಿಸೆಂಬರಲ್ಲಿ ಕೊಣಾಜೆ ಪೊಲೀಸರು ಬೋಳಿಯಾರ್ ಎಂಬಲ್ಲಿ ಮಹಮ್ಮದ್ ನೌಫಾಲ್, ಬಾತಿಷ್, ಮಹಮ್ಮದ್ ಅಶ್ರಫ್ ಎಂಬವರನ್ನ ಬಂಧಿಸಿ ಕೆಜಿ ಗಟ್ಟಲೆ ಗಾಂಜಾ ವಶಪಡಿಸಿಕೊಂಡಿದ್ದರು. ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದ್ದರಿಂದ ಜಾಮೀನು ಆಗಿರಲಿಲ್ಲ ಎಂದು ತಿಳಿದುಬಂದಿದೆ.