ಮಂಗಳೂರು: ನಗರದ ನವ ಮಂಗಳೂರು ಬಂದರಿಗೆ ಈ ಋತುವಿನ ಕೊನೆಯ ಪ್ರವಾಸಿ ಹಡಗು ಮಂಗಳವಾರ(ಮೇ.7) ಆಗಮಿಸಿದೆ. ರಿವೇರಾ ಎಂಬ ಹೆಸರಿನ ಈ ಹಡಗು ಮಂಗಳವಾರ ಬೆಳಗ್ಗೆ ಬಂದರಿಗೆ ಆಗಮಿಸಿದ್ದು, 1141 ಪ್ರಯಾಣಿಕರನ್ನು ಮತ್ತು 752 ಸಿಬ್ಬಂದಿಯನ್ನು ಹೊತ್ತು ತಂದಿದೆ.
ಎನ್ಎಂಪಿಎ ಬರ್ತ್ ನಂ. 04ರಲ್ಲಿ ಲಂಗರು ಹಾಕಿರುವ ಈ ಹಡಗು ಕೊರೊನಾ ಬಳಿಕದ ಈ ಎರಡು ವರ್ಷಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರೊಂದಿಗೆ ಆಗಮಿಸಿದೆ. ಕೊಚ್ಚಿನ್ ಬಂದರಿನಿಂದ ಮಂಗಳೂರಿಗೆ ಆಗಮಿಸಿದ ಹಡಗಿನಲ್ಲಿದ್ದ ಪ್ರಯಾಣಿಕರಿಗೆ ಸಾಂಪ್ರಾದಾಯಿಕ ಸ್ವಾಗತ ಕೋರಲಾಯಿತು. ಪ್ರಯಾಣಿಕರನ್ನು ಮಂಗಳೂರಿನ ವಿವಿಧ ಪ್ರವಾಸಿ ತಾಣಗಳಿಗೆ ಕರೆದೊಯ್ದು ಮಂಗಳೂರಿನ ಸೊಬಗನ್ನು ಪರಿಚಯಿಸಲಾಯಿತು. ಸಂಜೆ ವೇಳೆ ಈ ಹಡಗು ಮರ್ಮುಗೋವಾ ಬಂದರಿನತ್ತ ಪ್ರಯಾಣ ಬೆಳೆಸಿತು.