ಚಿತ್ರೀಕರಣದ ವೇಳೆ ಕಾಡಾನೆ ದಾಳಿ-ಮಾತೃಭೂಮಿ ಸುದ್ದಿ ವಾಹಿನಿ ಛಾಯಾಗ್ರಾಹಕ ಸಾವು

ಮಂಗಳೂರು(ಪಾಲಕ್ಕಾಡ್): ಕೇರಳ ಉತ್ತರ ಜಿಲ್ಲೆಯಲ್ಲಿ ವರದಿಗೆ ತೆರಳಿದ್ದ ಮಲಯಾಳಂ ಸುದ್ದಿ ಚಾನಲ್‌ನ ಛಾಯಾಗ್ರಹಕ ಕಾಡಾನೆ ದಾಳಿಯಲ್ಲಿ ಬುಧವಾರ ಮೃತಪಟ್ಟಿದ್ದಾರೆ.

ಎ.ವಿ.ಮುಕೇಶ್ (34) ಮೃತ ದುರ್ದೈವಿ. ಇವರು ಮಾತೃಭೂಮಿ ಸುದ್ದಿ ಸಂಸ್ಥೆಯ ಛಾಯಾಗ್ರಾಹಕ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾಡಾನೆಯ ಹಿಂಡೊಂದರ ಚಲನವಲನವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಸುದ್ದಿಗಾರ ಹಾಗೂ ಛಾಯಾಗ್ರಾಹಕರ ಮೇಲೆ ಆನೆಯೊಂದು ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ವರದಿಗಾರ ಮತ್ತು ವಾಹನ ಚಾಲಕ ಸುರಕ್ಷಿತ ಸ್ಥಳಕ್ಕೆ ಓಡಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆನೆಗಳ ಹಿಂಡು ನಿರಂತರವಾಗಿ ಕಂಡುಬರುವ ಸ್ಥಳವಾದ ಮಲಂಬುಳಾ ಹಾಗೂ ಕಂಜಿಕೋಡೆ ನಡುವೆ ಹರಿಯುವ ನದಿಯನ್ನು ಈ ಹಿಂಡು ದಾಟುತ್ತಿದ್ದವು. ಆ ದೃಶ್ಯವನ್ನು ಚಿತ್ರೀಕರಣ ಮಾಡುತ್ತಿದ್ದ ಸುದ್ದಿ ಸಂಸ್ಥೆಯ ಸಿಬ್ಬಂದಿ ಮೇಲೆ ಆನೆ ದಾಳಿ ನಡೆಸಿತ್ತು. ಇದರಲ್ಲಿ ಛಾಯಾಗ್ರಾಹಕ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಮಲಪ್ಪುರಂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಪುರಂ ಜಿಲ್ಲೆಯ ಪರಪ್ಪನಂಗಡಿ ಮೂಲದವರಾದ ಮುಕೇಶ್, ಕಳೆದ ಒಂದು ವರ್ಷದಿಂದ ಮಾತೃಭೂಮಿ ಸುದ್ದಿ ವಾಹಿನಿಯ ಪಾಲಕ್ಕಾಡ್ ಬ್ಯೂರೊದಲ್ಲಿ ಕೆಲಸ ಮಾಡುತ್ತಿದ್ದರು. ಅದಕ್ಕೂ ಪೂರ್ವದಲ್ಲಿ ಕೆಲ ವರ್ಷಗಳ ಕಾಲ ದೆಹಲಿ ಬ್ಯೂರೊದಲ್ಲೂ ಕರ್ತವ್ಯ ನಿರ್ವಹಿಸಿದ್ದರು. ‘ಅತಿಜೀವನಂ’ ಎಂಬ ಶೀರ್ಷಿಕೆಯಡಿ ಹಲವು ಅಂಕಣಗಳನ್ನು ಮುಕೇಶ್ ಬರೆದಿದ್ದಾರೆ. ಸಮಾಜದ ಕೆಳಸ್ಥರದಲ್ಲಿರುವ ಜನರ ಕುರಿತು ಅವರು ಬೆಳಕು ಚೆಲ್ಲುವ ಪ್ರಯತ್ನ ನಡೆಸಿದ್ದರು. ತಮ್ಮ ಅಂಕಣಗಳಲ್ಲಿ ಉಲ್ಲೇಖಿಸುತ್ತಿದ್ದ ಸಮುದಾಯಗಳ ಜನರ ಕಷ್ಟಗಳಿಗೆ ಮುಕೇಶ್ ಸ್ಪಂದಿಸುತ್ತಿದ್ದರು. ಕೆಲವೊಮ್ಮೆ ತಮ್ಮ ವೇತನವನ್ನೇ ಇವರ ಆರ್ಥಿಕ ಸಹಾಯಕ್ಕೆ ಬಳಕೆ ಮಾಡಿದ ಉದಾಹರಣೆಗಳೂ ಇವೆ ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್, ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್, ಸಚಿವ ಎ.ಕೆ.ಶಶೀಧರನ್, ಎಂ.ಬಿ.ರಾಜೇಶ್, ಸಾಯಿ ಚೆರಿಯನ್ ಮುಕೇಶ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here