ಮಂಗಳೂರು: ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿ 2023-24ರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 4,41,910 ವಿದ್ಯಾರ್ಥಿಗಳು ಮತ್ತು 4,28,058 ವಿದ್ಯಾರ್ಥಿನಿಯರು. ಪರೀಕ್ಷಾ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟಗೊಂಡಿದೆ.
94% ಫಲಿತಾಂಶದೊಂದಿಗೆ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, 92.12% ಫಲಿತಾಂಶದೊಂದಿಗೆ ದ.ಕ ಎರಡನೇ ಸ್ಥಾನದಲ್ಲಿದೆ. 88.67% ಫಲಿತಾಂಶದೊಂದಿಗೆ ಶಿವಮೊಗ್ಗ 3ನೇ ಸ್ಥಾನದಲ್ಲಿದೆ. 50.59% ಫಲಿತಾಂಶದೊಂದಿಗೆ ಯಾದಗಿರಿ ಕೊನೆಯ ಸ್ಥಾನದಲ್ಲಿದೆ. kseeb.kar.nic.in ಮತ್ತು karresult.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಪಡೆದಿದ್ದು ಅಂಕಿತಾ ಬಸಪ್ಪ ಬಾಗಲಕೋಟೆ 625/625 ಪಡೆದುಕೊಂಡಿದ್ದಾರೆ. ಬೆಂಗಳೂರಿನ ಮೇಧಾ ಪಿ ಶೆಟ್ಟಿ, ದಕ್ಷಿಣ ಕನ್ನಡ ಬೆಳ್ತಂಗಡಿಯ ಎಸ್ ಡಿ ಎಂ ಪ್ರೌಢಶಾಲಾ ವಿದ್ಯಾರ್ಥಿ ಚಿನ್ಮಯ್, ಮಧುಗಿರಿಯ ಹರ್ಷಿತಾ ಡಿ ಎಂ, ಚಿಕ್ಕೋಡಿಯ ಸಿದ್ದಾಂತ್, ಶಿರಸಿಯ ದರ್ಶನ್, ಶ್ರೀರಾಮ್, ಚಿನ್ಮಯ್ 624/625 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದಾರೆ. ಕಾರ್ಕಳ ತಾಲೂಕು ಕುಕ್ಕುಂದೂರಿನ ಜ್ಞಾನ ಸುಧಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸಹನಾ 623/625 ಅಂಕ ಪಡೆದು ರಾಜ್ಯದಲ್ಲಿ 3ನೇ ಸ್ಥಾನದಲ್ಲಿದ್ದಾರೆ.
ರಾಜ್ಯದ 78 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿದ್ದು, ಅವುಗಳಲ್ಲಿ ಕಲಬುರ್ಗಿ ವಿಭಾಗದಲ್ಲಿ 43 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿದೆ. ಕಲಬುರ್ಗಿಯಲ್ಲಿ 18 ಶಾಲೆ, ಬೀದರ್ ನಲ್ಲಿ 9, ಯಾದಗಿರಿಯಲ್ಲಿ 6, ರಾಯಚೂರು 5, ಕೊಪ್ಪಳ 2, ವಿಜಯನಗರ 2, ಬಳ್ಳಾರಿಯ 1 ಶಾಲೆಯಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
ಪುತ್ತೂರಿನ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಗೆ 100% ಫಲಿತಾಂಶ ಲಭಿಸಿದ್ದು, ಈ ಶಾಲೆಯ ವಿದ್ಯಾರ್ಥಿನಿ ಶ್ರೀಯಾ 621/625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಸಾಂದೀಪನಿ ವಿದ್ಯಾಲಯ 100% ಫಲಿತಾಂಶ ಪಡೆದುಕೊಂಡಿದ್ದು, ಇಲ್ಲಿನ ವಿದ್ಯಾರ್ಥಿ ಪಿ ಕೆ ರಕ್ಷಿತ್ 597/625 ಅಂಕ ಪಡೆದುಕೊಂಡಿದ್ದಾರೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ ಲಭಿಸಿದ್ದು, ಇಲ್ಲಿನ ವಿದ್ಯಾರ್ಥಿನಿ ಕವನ 593/625 ಅಂಕ ಗಳಿಸಿ ಶಾಲೆಯಲ್ಲಿ ಟಾಪರ್ ಎನಿಸಿಕೊಂಡಿದ್ದಾರೆ. ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಗೆ 100% ಫಲಿತಾಂಶ ಲಭ್ಯವಾಗಿದ್ದು, 619/625 ಅಂಕಗಳನ್ನು ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿನಿ ಅಕ್ಷತಾಗಂಗಾ ಶಾಲೆಯಲ್ಲಿ ಟಾಪರ್ ಆಗಿದ್ದಾರೆ. ಸವಣೂರು ವಿದ್ಯಾರಶ್ಮಿ 93.50% ಫಲಿತಾಂಶ ಪಡೆದಿದ್ದು, ಇಲ್ಲಿನ ವಿದ್ಯಾರ್ಥಿನಿ ಸುಪ್ರಿತಾ ಆರ್ 607/625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಬೆಟ್ಟಂಪಾಡಿ ಪ್ರಿಯದರ್ಶಿನಿ ಶಾಲೆ 100% ಫಲಿತಾಂಶ ದಾಖಲಿಸಿದ್ದು, ಇಲ್ಲಿನ ವಿದ್ಯಾರ್ಥಿ 602/625 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿದ್ದಾರೆ. ಪುತ್ತೂರು ರಾಮಕೃಷ್ಣ ಪ್ರೌಢ ಶಾಲೆ ಆಂಗ್ಲ ಮಾಧ್ಯಮ ವಿಭಾಗದಲ್ಲಿ 100% ಫಲಿತಾಂಶ ಪಡೆದಿದ್ದು, 584/625 ಅಂಕಗಳನ್ನು ಪಡೆಯುವ ಮೂಲಕ ಇಲ್ಲಿನ ವಿದ್ಯಾರ್ಥಿನಿ ಪ್ರಕೃತಿ ಟಾಪರ್ ಎನಿಸಿಕೊಂಡಿದ್ದಾರೆ. ಕನ್ನಡ ಮಾದ್ಯಮದಲ್ಲಿ 588/625 ಅಂಕಗಳನ್ನು ಪಡೆಯುವ ಮೂಲಕ ನಿಶಾಂತ್ ಪಿ ಟಾಪರ್ ಎನಿಸಿಕೊಂಡಿದ್ದಾರೆ. ಸಂತ ಫಿಲೋಮಿನಾ ಹೈಸ್ಕೂಲ್ 95.12% ಫಲಿತಾಂಸ ದಾಖಲಿಸಿದ್ದು, ಶಾಲೆಯ ಅವಳಿ ಸಹೋದರಿಯರು ಮೊದಲ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಚೈತ್ರಾ 599/625 ಅಂಕ ಪಡೆದು ಮೊದಲ ಸ್ಥಾನದಲ್ಲಿದ್ದು, ಸಹೋದರಿ ಚೈತ್ರಾ 593/625 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನಿಯಾಗಿದ್ದಾರೆ.