ಮಂಗಳೂರು: ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆ ನಡೆಯುತ್ತಿರುವಾಗಲೇ ನಾಪತ್ತೆಯಾಗಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ವೆಲೆನ್ಸಿಯಾದಲ್ಲಿರುವ ರೋಶನಿ ನಿಲಯ ಕಾಲೇಜಿನ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜ್ (21) ನಾಪತ್ತೆಯಾದ ವಿದ್ಯಾರ್ಥಿನಿ.
ರೋಶನಿ ನಿಲಯದಲ್ಲಿ ಕ್ರಿಮಿನಾಲಜಿ ಆ್ಯಂಡ್ ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಎಂಎಸ್ಸಿ ಮೊದಲನೇ ವರ್ಷದಲ್ಲಿ ಕಲಿಯುತ್ತಿದ್ದ ಎಲಿಜಬೆತ್ ದೀಪಿಕಾ ಪೊನ್ನುರಾಜ್ ಮೇ 7ರಂದು 2ನೇ ಸೆಮಿಸ್ಟರ್ ಪರೀಕ್ಷೆ ಪೂರೈಸಿ ಹೊರ ಬಂದಿದ್ದಳು. ಆದರೆ ಕಾಲೇಜು ಕೊಠಡಿಯಿಂದ ಹೊರಬಂದಿದ್ದ ಎಲಿಜಬೆತ್ ದೀಪಿಕಾ ಆ ಬಳಿಕ ಪರೀಕ್ಷಾ ಹಾಲ್‌ಗೆ ತೆರಳದೆ ನಾಪತ್ತೆಯಾಗಿದ್ದಾಳೆ. ಕಾಲೇಜಿನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಕಾಲೇಜಿನಿಂದ ಹೊರಗೆ ಹೋಗಿರುವುದು ಕಂಡು ಬಂದಿದೆ. 5.6 ಅಡಿ ಎತ್ತರ, ಗೋಧಿ ಮೈಬಣ್ಣದ, ದಪ್ಪ ಶರೀರದ ದೀಪಿಕಾ ಕಾಲೇಜಿನ ಸಮವಸ್ತ್ರ ಧರಿಸಿ ಹೊರಗೆ ತೆರಳಿದ್ದಳು. ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್ ಭಾಷೆ ಬಲ್ಲ ಈಕೆಯನ್ನು ಕಂಡವರು 0824-2220800/ 2220518/ 9480805339/ 9480805346ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.