ಮಂಗಳೂರು: ಸಾಮಾನ್ಯವಾಗಿ ಪ್ರಾಯಕ್ಕೆ ಬಂದ ಹುಡುಗ ಹುಡುಗಿಗೆ ಸರಿಯಾದ ಸಂಬಂಧ ಕೂಡಿ ಬರದೇ ಜಾಹೀರಾತಿನ ಮೊರೆ ಹೋಗುವುದುಂಟು. ಆದರೆ ಕರಾವಳಿಯ ಸುದ್ದಿ ಬಿಡುಗಡೆ ಪತ್ರಿಕೆಯ ಜಾಹೀರಾತು ಕಟ್ಟಿಂಗ್ ಭಾರೀ ವೈರಲ್ ಆಗುತ್ತಿದೆ. ಜಾಹಿರಾತಿನಲ್ಲಿ ಸುಮಾರು ಮೂವತ್ತು ವರ್ಷಗಳ ಹಿಂದೆ ಮೃತಪಟ್ಟ ಯುವತಿಗೆ ಮದುವೆ ಮಾಡಿಸಲು ಪ್ರೇತವರ ಬೇಕೆನ್ನಲಾಗಿದೆ. ಈ ಜಾಹೀರಾತು ನೋಡಿ ಜನ ಅಚ್ಚರಿಗೊಂಡಿದ್ದಾರೆ.ಈ ಜಾಹೀರಾತು ಕಟ್ಟಿಂಗ್ ಭಾರೀ ವೈರಲ್ ಆಗುತ್ತಿದೆ. ತುಳುವ ಸಂಪ್ರಾದಾಯದಲ್ಲಿ ವಿಭಿನ್ನ ಆಚರಣೆಗಳನ್ನು ಕಾಣಬಹುದಾಗಿದ್ದು ಕುಲೆ ಮದಿಮೆ ಇದರಲ್ಲೊಂದು. ಈ ಸಂಪ್ರಾದಾಯ ಹೇಗಿರುತ್ತೆ ಎನ್ನುವ ಡಿಟೈಲ್ ಇಲ್ಲಿದೆ.
ಏನಿದು ಕುಲೆ ಮದುವೆ: ಈ ಮದುವೆಯಲ್ಲಿ ಹೆಣ್ಣಾಗಲೀ ಗಂಡಾಗಲೀ ಇರಲ್ಲ. ಆದರೂ ಮದುವೆ ನಡೆಯುತ್ತದೆ. ಹೆಣ್ಣು ಗಂಡಿನ ಎರಡೂ ಕುಟುಂಬಗಳು ಸೇರಿ ಸಂಭ್ರಮಿಸುತ್ತಾರೆ, ಮದುವೆಯೂಟ ಉಂಡು ಸಂತೃಪ್ತರಾಗುತ್ತಾರೆ. ಇದೇನು ವಿಚಿತ್ರ ಎನ್ನಬೇಡಿ. ಆದರೆ ತುಳುನಾಡಿನ ದ.ಕ, ಉಡುಪಿ, ಕೇರಳದ ಗಡಿಭಾಗದಲ್ಲಿ ಇಂತಹ ಸಂಪ್ರದಾಯವನ್ನು ಕಾಣಬಹುದು. ಅಷ್ಟಕ್ಕೂ ಇಲ್ಲಿ ನಡೆಯುತ್ತಿರುವುದು, ಅಕ್ಷರಶಃ ಮದುವೆಯೇ. ಆದರೆ ಇದು ಅಂತಿಂತ ಮದುವೆಯಲ್ಲ, ಪ್ರೇತಾತ್ಮಗಳ ಮದುವೆ. ತುಳುನಾಡಿನಲ್ಲಿ ಇದನ್ನು ಕುಲೆ ಮದಿಮೆ ಅಥವಾ ಸೈತಿನಕುಲ್ನ ಮದಿಮೆ ಎಂದೂ ಕರೆಯುತ್ತಾರೆ. ತುಳುನಾಡಿನ ಈ ಸಂಪ್ರಾದಾಯಗಳು ಅಚ್ಚರಿ ಎನಿಸಿದರೂ ಇದರ ಹಿಂದೆ ಹಲವು ಕಾರಣಗಳಿವೆ. ಯಾರಾದರೂ ಮದುವೆ ವಯಸ್ಸಿಗೆ ಬಂದು ಮೃತ ಪಟ್ಟಿದ್ದರೆ ಅಂತವರ ಆತ್ಮ ಸದ್ಗತಿ ಕಾಣದೆ ಪ್ರೇತಾತ್ಮಗಳಾಗಿ ಅಲೆದಾಡುತ್ತಾ ಕುಟುಂಬಿಕರಿಗೆ ತೊಂದರೆ ನೀಡುತ್ತದೆ ಎನ್ನುವ ನಂಬಿಕೆಯಿದೆ. ಹಾಗಾಗಿ ಅಂತಹ ಆತ್ಮಗಳಿಗೆ ಸದ್ಗತಿ ಕಲ್ಪಿಸಲು ಸಾವನ್ನಪ್ಪಿರುವ ಮದುವೆ ವಯಸ್ಸಿಗೆ ಬಂದ ಗಂಡು ಅಥವಾ ಹೆಣ್ಣು ಪ್ರೇತವನ್ನು ಹುಡುಕಬೇಕಾಗುತ್ತದೆ. ಅಂತಹ ಕುಟುಂಬಿಕರನ್ನು ಸಂಪರ್ಕಿಸಿ ಪರಸ್ಪರ ಮಾತುಕತೆ ನಡೆದು ಮದುವೆ ಎರ್ಪಾಡು ಮಾಡಬೇಕು. ಹೀಗಾದರೆ ಮಾತ್ರ ಮೃತಪಟ್ಟ ಆ ಹೆಣ್ಣು ಅಥವಾ ಗಂಡು ಇಹಲೋಕದಲ್ಲಿ ಕಾಣದ ದಾಂಪತ್ಯ ಸುಖವನ್ನು ಪರಲೋಕದಲ್ಲಿ ಕಾಣುತ್ತಾರೆ ಎನ್ನುವುದು ಇದರ ಹಿಂದಿನ ನಂಬಿಕೆ.
ಮದುವೆ ಹೇಗೆ ನಡೆಯುತ್ತದೆ: ಒಂದು ಮಣೆಯಲ್ಲಿ ವರನ ಉಡುಗೆ ಇನ್ನೊಂದು ಮಣೆಯಲ್ಲಿ ವಧುವಿನ ಉಡುಗೆಯನ್ನಿಡಲಾಗುತ್ತದೆ. ಕೆಲವು ಕಡೆಗಳಲ್ಲಿ ಬೆಳ್ಳಿ ಅಥವಾ ಅಕ್ಕಿಯಿಂದ ಮಾಡಿದ ವಧು ವರನ ಬಿಂಬಗಳನ್ನು ಇಡಲಾಗುತ್ತದೆ. ಇಲ್ಲಿ ವಧುವಿಗೆ ಮುತ್ತೈದೆ ಯ ಅಲಂಕಾರವನ್ನು ಮಾಡಿ, ಮಣೆಯಲ್ಲಿ ಹೂ ಹಾರಗಳನ್ನು ಇಡಲಾಗುತ್ತದೆ. ಬಳಿಕ ತಾಳಿ ಕಟ್ಟುವ ಸಂಪ್ರದಾಯ, ದಾರೆ ಎರೆದು ಕೊಡುವುದು, ಎಲ್ಲವೂ ಸಂಪ್ರದಾಯದಂತೆ ನಡೆದು ಕೊನೆಗೆ ಮದುವೆಯೂಟದ ಜೊತೆಗೆ ಸಮಾಪ್ತಿಗೊಳ್ಳುತ್ತದೆ. ಸತ್ತವರು ನಮ್ಮ ನಡುವೆಯೇ ಇರುತ್ತಾರೆ ಎನ್ನುವುದು ಕರಾವಳಿಯ ತುಳುವರ ನಂಬಿಕೆ. ಮಿಕ್ಕೆಲ್ಲಾ ಸಂಪ್ರಾದಾಯಗಳಿಗಿಂತ ತುಳುವ ಸಂಪ್ರದಾಯ ವಿಭಿನ್ನವಾಗಿದ್ದು, ಸ್ವಾರಸ್ಯಕರವಾಗಿರುತ್ತದೆ. ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬಂದ ಈ ಜಾಹಿರಾತು ಕಟ್ಟಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತುಳುನಾಡಿನ ಆಚರಣೆಯ ಬಗ್ಗೆ ನಾಡಿನಾದ್ಯಂತ ಚರ್ಚೆಯಾಗುವಂತೆ ಮಾಡಿದೆ.