ಮುಂಬೈನಲ್ಲಿ ಧೂಳಿನ ಬಿರುಗಾಳಿ – ಆತಂಕಗೊಂಡ ಮಹಾನಗರದ ಜನತೆ

ಮಂಗಳೂರು (ಮುಂಬೈ) :ಬಿರುಗಾಳಿಯೊಂದಿಗೆ ಬಂದ ಈ ವರ್ಷದ ಮೊದಲ ಮಳೆ ಮುಂಬೈ ನಿವಾಸಿಗಳಿಗೆ ಹರ್ಷ ತಂದರೂ, ಮಹಾನಗರವನ್ನು ಆವರಿಸಿಕೊಂಡ ಧೂಳಿನಿಂದಾಗಿ ಮಹಾನಗರದ ಜನತೆ ಆತಂಕಕ್ಕೆ ಒಳಗಾದರು. ಇಂದು ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಬೀಸಿದ ಭಾರೀ ಬಿರುಗಾಳಿಗೆ ಧೂಳು ಆವರಿಸಿ ಮುಂಬೈ ನಗರ  ಕತ್ತಲ ರಾತ್ರಿಯ ಅನುಭವ ನೀಡಿತು.

ಬಿರುಗಾಳಿ ಏಳುತ್ತಿದ್ದಂತೆ ಗಾಬರಿಯಾದ ಜನರು ಸುರಕ್ಷಿತ ಜಾಗಗಳನ್ನು ತಲುಪಿಕೊಂಡರು. ವಾಹನ ಸವಾರರು ವಾಹನಗಳನ್ನು ಪಾರ್ಕ್‌ ಮಾಡಿ ಸಿಕ್ಕ ಸಿಕ್ಕ ಕಟ್ಟಡಗಳಲ್ಲಿ ಆಸರೆ ಪಡೆದುಕೊಂಡರು. ಬಾಂದ್ರಾ ಕುರ್ಲಾ, ಧಾರಾವಿ, ಘಾಟ್ಕೋಪರ್‌ ಪ್ರದೇಶಗಳಲ್ಲಿ ಧೂಳು ಸಹಿತ ಬಿರುಗಾಳಿ ತೀವ್ರವಾಗಿತ್ತು. ಬಿರುಗಾಳಿಯ ಕಾರಣದಿಂದ ಮುಂಬೈ ವಿಮಾನ ನಿಲ್ದಾಣದಲ್ಲಿ ಎಲ್ಲ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ನೂರು ಅಡಿ ಎತ್ತರದ ಜಾಹೀರಾತು ಫಲಕವೊಂದು ಮುಂಬೈನ ಚೆಡ್ಡಾನಗರದ ಪೆಟ್ರೋಲ್‌ ಪಂಪ್‌ ಮೇಲೆ ಬಿದ್ದಿದ್ದು, ಅದೃಷ್ಟವಶಾತ್‌ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ. ಭಾರತೀಯ ಹವಾಮಾನ ಇಲಾಖೆ ಮುಂಬೈನ ಥಾಣೆ, ಪಾಲ್ಗರ್‌ ಮತ್ತಿತರ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ್ದು, ಕೆಲವು ಭಾಗಗಳಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಬರ್ಬನ್‌ ರೈಲು ಸೇವೆಯಲ್ಲೂ ಹಲವೆಡೆ ವ್ಯತ್ಯಯವಾಗಿದೆ. ನಗರದ ಹಲವು ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿದ್ದು ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

 

 

LEAVE A REPLY

Please enter your comment!
Please enter your name here