ಮಂಗಳೂರು: ಶ್ರೀಲಂಕಾದ ಪ್ರತ್ಯೇಕವಾದಿ ಸಂಘಟನೆ ಎಲ್‌ಟಿಟಿಇ ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಪುನಃ 5 ವರ್ಷಗಳ ಕಾಲ ವಿಸ್ತರಿಸಿದೆ. ಜನರಿಗೆ ಪ್ರತ್ಯೇಕವಾದದ ಬಗ್ಗೆ ಪ್ರವೃತ್ತಿಯನ್ನು ಬೆಳಸುವುದರ ಜೊತೆಗೆ ಭಾರತದ ಪ್ರಾದೇಶಿಕ ಸಮಗ್ರತೆಗೆ ಮುಖ್ಯವಾಗಿ ತಮಿಳುನಾಡಿಗೆ ಬೆದರಿಕೆಯಾಗಿದೆ ಎಂದು ಕೇಂದ್ರ ತಿಳಿಸಿದೆ.
ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯಿದೆ 1967ರ ಸೆಕ್ಷನ್ 3 ಹಾಗೂ ಉಪ ವಿಭಾಗ 1ರಡಿ ಕೇಂದ್ರ ಗೃಹ ಸಚಿವಾಲಯವು ನಿಷೇಧ ಜಾರಿಗೊಳಿಸಿದೆ. ಎಲ್‌ಟಿಟಿಇ ಸಂಘಟನೆ ಮುಖ್ಯವಾಗಿ ಶ್ರೀಲಂಕಾದಲ್ಲಿದ್ದರೂ ಇದರ ಬೆಂಬಲಿಗರು ಹಾಗೂ ಸಹಾನುಭೂತಿ ವ್ಯಕ್ತಪಡಿಸುವವರು ಹಾಗೂ ಏಜೆಂಟ್‌ಗಳು ಭಾರತದ ಭೂಪ್ರದೇಶದಲ್ಲಿ ಇದ್ದಾರೆ ಎಂದು ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದೇಶದ ಸಮಗ್ರತೆ ಹಾಗೂ ಭದ್ರತೆಯಲ್ಲಿಎಲ್‌ಟಿಟಿಇ ಇನ್ನೂ ಅಹಿತಕರ ಚಟುವಟಿಕೆಗಳಲ್ಲಿ ತೊಡಗಿದೆ ಎಂದು ಗೃಹ ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಶ್ರೀಲಂಕಾದ ಮಿಲಿಟರಿಯಿಂದ 2009ರಲ್ಲಿ ಹಿನ್ನಡೆ ಅನುಭವಿಸಿದ ನಂತರ ಎಲ್‌ಟಿಟಿಇ ತಮಿಳರಿಗೆ ಪ್ರತ್ಯೇಕ ರಾಷ್ಟ್ರವಾಗುವ ಪರಿಕಲ್ಪನೆಯನ್ನು ಕೈಬಿಟ್ಟಿಲ್ಲ. ಉಳಿದಿರುವ ಎಲ್‌ಟಿಟಿಇ ನಾಯಕರು ಹಾಗೂ ಕೇಡರ್‌ಗಳು ಚದುರಿದ ಕಾರ್ಯಕರ್ತರನ್ನು ಮತ್ತೆ ಒಂದೂಗೂಡಿಸಲು ಸ್ಥಳೀಯವಾಗಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಹಸ್ಯವಾಗಿ ಹಣಕಾಸು ಸಂಗ್ರಹಿಸುವುದು ಹಾಗೂ ಪ್ರಚಾರದ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಸೂಚನೆಯಲ್ಲಿ ತಿಳಿಸಲಾಗಿದೆ. 1976ರಲ್ಲಿ ಶ್ರೀಲಂಕಾದಲ್ಲಿ ರೂಪುಗೊಂಡ ಎಲ್‌ಟಿಟಿಇ ನಂತರದ ವರ್ಷಗಳಲ್ಲಿ ತನ್ನ ಸಂಘಟನೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಯಿತು. 1991ರಲ್ಲಿ ಭಾರತದ ಮಾಜಿ ಪ್ರಧಾನಿ ಎಲ್‌ಟಿಟಿಇನಿಂದ ಹತರಾದ ನಂತರ ಭಾರತದಲ್ಲಿ ಈ ಸಂಘಟನೆಯನ್ನು ನಿಷೇಧಿಸಲಾಗಿತ್ತು. 2009ರಲ್ಲಿ ಮುಖ್ಯಸ್ಥ ವೇಲುಪಿಳ್ಳೆ ಪ್ರಭಾಕರನ್ ಮೃತಪಟ್ಟ ನಂತರ ಸಂಘಟನೆ ಮತ್ತಷ್ಟು ಕುಸಿಯಿತು.