ಮಂಗಳೂರು(ಜಾಮ್ನರ್): ರಜೆ ಕಳೆಯಲು ಮನೆಗೆ ಬಂದಿದ್ದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಕಪಾಡೆ(39) ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿ ಜಾಮ್ನರ್ ನಲ್ಲಿ ಈ ಘಟನೆ ನಡೆದಿದೆ.
ಜಾಮ್ನರ್ ಗಣಪತಿ ನಗರ ನಿವಾಸಿ, ರಾಜ್ಯ ರಿಸರ್ವ್ ಪೊಲೀಸ್ ಜವಾನ್ ಪ್ರಕಾಶ್ ಕಾಪ್ಡೆ ಕೇಂದ್ರ ಸಚಿವ ನಾರಾಯಣ್ ರಾಣೆ, ಸಚಿವ ಛಗನ್ ಭುಜ್ಬಲ್ ಅವರ ಅಂಗರಕ್ಷಕನಾಗಿ ಕೆಲಸ ಮಾಡಿದ್ದು, ಬಳಿಕ ಸಚಿನ್ ತೆಂಡೂಲ್ಕರ್‌ಗೆ ಭದ್ರತೆ ಒದಗಿಸಲು ನೇಮಕಗೊಂಡಿದ್ದರು. ಮೃತರು ತಾಯಿ, ತಂದೆ, ಪತ್ನಿ, ಇಬ್ಬರು ಪುತ್ರರು, ಸಹೋದರ ಹಾಗೂ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಪ್ಡೆ ಅವರ ಆತ್ಮಹತ್ಯೆಯ ಹಿಂದಿನ ಕಾರಣವನ್ನು ಇನ್ನೂ ತಿಳಿದುಬಂದಿಲ್ಲ. ಕಪ್ಡೆ ಪ್ರಸ್ತುತ ಸಚಿನ್ ತೆಂಡೂಲ್ಕರ್ ಅವರ ಮನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕಳೆದ ಎಂಟು ದಿನಗಳಿಂದ ತಮ್ಮ ಗ್ರಾಮದಲ್ಲಿದ್ದರು. ಕೆಲ ದಿನಗಳ ರಜೆ ಪಡೆದು ತವರೂರಾದ ಜಮ್ನೇರ್‌ಗೆ ತೆರಳಿದ್ದ ಪ್ರಕಾಶ್ ಕಾಪ್ಡೆ ಕುಟುಂಬದ ಜೊತೆ ಕಾಲ ಕಳೆದಿದ್ದರು. ಪೂರ್ವಜರ ಮನೆಗೂ ಭೇಟಿ ನೀಡಿದ್ದರು. 39 ವರ್ಷದ ಪ್ರಕಾಶ್ ಕಾಪ್ಡೆ ತಮ್ಮ ರಿವಾಲ್ವರ್‌ನಿಂದ ಕುತ್ತಿಗೆಗೆ ಗುಂಡು ಹಾರಿಸಿ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕಾಶ್ ಕಾಪ್ಡೆ ಮೃತದೇಹ, ರಿವಾಲ್ವರ್, ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ.