ಮಂಗಳೂರು(ಬೆಂಗಳೂರು): ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ ನೀತಿ ಸಂಹಿತೆ ಸಡಿಲಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ಸೂಚಿಸಿದ್ದು, ರಾಜ್ಯ ಸರಕಾರ ಕೇಳಿದ್ದ ಕೆಲವೇ ಪ್ರಸ್ತಾವನೆಗಳಿಗೆ ಸೀಮಿತವಾಗಿ ಷರತ್ತು ಬದ್ಧ ವಿನಾಯಿತಿಯನ್ನು ಆಯೋಗ ನೀಡಿದೆ.
ಬರ ಪರಿಹಾರ ಕಾಮಗಾರಿಗಳ ಪರಾಮರ್ಶೆ, ಮೂಲ ಸೌಲಭ್ಯ, ಅಭಿವೃದ್ಧಿ ಕಾಮಗಾರಿ, ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಟೆಂಡರ್ ಆಹ್ವಾನ, ಅಂತಿಮಗೊಳಿಸುವಿಕೆ, ಕಾರ್ಯಾದೇಶ ನೀಡುವಿಕೆ ಮತ್ತು ನಿಗಮ-ಮಂಡಳಿಗಳ ಶಾಸನಾತ್ಮಕ ಸಭೆಗಳನ್ನು ನಡೆಸಲು ನೀತಿ ಸಂಹಿತೆ ಸಡಿಗೊಳಿಸಿ ಆದೇಶಿಸಿದೆ. ಕರ್ನಾಟಕಕ್ಕೂ ಮೊದಲು ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯ ಮತದಾನ ಮುಗಿದಿತ್ತು. ತತ್‌ಕ್ಷಣವೇ ನೀತಿ ಸಂಹಿತೆ ತೆರವಿಗೆ ತಮಿಳುನಾಡು ಸರಕಾರ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಅದನ್ನು ಚುನಾವಣಾ ಆಯೋಗ ತಿರಸ್ಕರಿಸಿತ್ತು. ಇದರಿಂದ ಪಾಠ ಕಲಿತ ಕರ್ನಾಟಕ ಸರಕಾರ, ನಿರ್ದಿಷ್ಟ ಪ್ರಕರಣಗಳಿಗೆ ಸೀಮಿತವಾಗಿ ನೀತಿ ಸಂಹಿತೆಯನ್ನು ಸಡಿಲಗೊಳಿಸುವಂತೆ ಕೋರಿತ್ತು. ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮತದಾನ ಮುಗಿದ ಬೆನ್ನಲ್ಲೇ ವಿಧಾನಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ್ದರಿಂದ ನೀತಿ ಸಂಹಿತೆ ಮುಂದುವರಿದಿತ್ತು. ಹೀಗಾಗಿ ಸದಾಚಾರ ಸಂಹಿತೆಯನ್ನು ಸಡಿಲ ಮಾಡುವುದಿಲ್ಲ ಎನ್ನುವ ಸಾಧ್ಯತೆಗಳೇ ಹೆಚ್ಚಿತ್ತು. ಆದರೆ, ರಾಜ್ಯದಲ್ಲಿ ಬರಗಾಲವಿ ದ್ದುದರಿಂದ ತುರ್ತು ಆವಶ್ಯಕತೆಗಳನ್ನು ಪೂರೈಸುವುದು ಸೇರಿದಂತೆ ಕೆಲ ನಿತ್ಯನೈಮಿತ್ತಿಕ ಆಗು-ಹೋಗುಗಳಿಗೆ ಸಂಬಂಧಿಸಿದ ನಿರ್ವಹಣೆ ಮಾಡಲು ಆಯೋಗ ಅನುಮತಿಸಿದೆ.
ರಾಜ್ಯ ಸರಕಾರ ಆಯೋಗದಲ್ಲಿ ಕೇಳಿದ್ದೇನು?
*ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಸರಕಾರವು ಬರಪೀಡಿತ ಎಂದು ಘೋಷಿಸಿದೆ. ಜಿಲ್ಲಾಡಳಿತಗಳಿಂದ ತೆಗೆದುಕೊಂಡಿರುವ ಬರ ಪರಿಹಾರ ಕಾಮಗಾರಿಗಳನ್ನು ಪರಿಶೀಲಿಸುವ ತುರ್ತು ಆವಶ್ಯಕತೆ ಇದೆ. ಹೀಗಾಗಿ ಚುನಾವಣಾ ಆಯೋಗದ ಪರಿಶೀಲನ ಸಮಿತಿಯು ಅತಿವೃಷ್ಟಿ ಮತ್ತು ಅನಾವೃಷ್ಟಿ ಪರಿಹಾರ ಕಾಮಗಾರಿಗಳ ಪರಾಮರ್ಶೆ ಮಾಡಲು ನೀತಿ ಸಂಹಿತೆ ಸಡಿಲಗೊಳಿಸಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಪರಾಮರ್ಶೆ ಸಭೆ ಅಥವಾ ವೀಡಿಯೋ ಸಂವಾದ ನಡೆಸಲು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಮಂತ್ರಿಗಳಿಗೆ ಅನುಮತಿ ನೀಡಬೇಕು.
*ಲೋಕಸಭೆ ಚುನಾವಣೆ ಮುಗಿದರೂ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಆದರೆ, ವಿವಿಧ ಇಲಾಖೆಗಳು, ಸಂಸ್ಥೆಗಳು, ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಂದೆ ಟೆಂಡರ್ ಪ್ರಕ್ರಿಯೆಗಳು ಬಾಕಿ ಉಳಿದಿವೆ. ಮೂಲ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿ, ಸರಕು ಮತ್ತು ಸೇವೆಗಳ ಖರೀದಿಗೆ ಸಂಬಂಧಿಸಿದ ಟೆಂಡರ್‌ಗಳನ್ನು ಆಹ್ವಾನಿಸುವುದು, ಟೆಂಡರ್‌ಗಳನ್ನು ಅಂತಿಮಗೊಳಿಸುವುದು ಹಾಗೂ ಕಾರ್ಯಾದೇಶಗಳನ್ನು ನೀಡುವ ಕುರಿತು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಮಾದರಿ ನೀತಿ ಸಂಹಿತೆಯಿಂದ ಸಾಮಾನ್ಯ ವಿನಾಯಿತಿ ನೀಡಬೇಕು.
*ಸರಕಾರದ ವಿವಿಧ ನಿಗಮಗಳು, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಶಾಸನಾತ್ಮಕ ಸಂಸ್ಥೆಗಳಲ್ಲಿ ಶಾಸನಾತ್ಮಕ ಸಭೆಗಳನ್ನು ನಡೆಸುವ ಸಲುವಾಗಿ ನೀತಿ ಸಂಹಿತೆ ಸಡಿಲಗೊಳಿಸಲು ಮನವಿ.
ಚುನಾವಣಾ ಆಯೋಗ ಸರಕಾರಕ್ಕೆ ಹೇಳಿದ್ದೇನು?
*ಶಾಸನಾತ್ಮಕ ಸಂಸ್ಥೆಗಳು ಶಾಸನಾತ್ಮಕ ಸಭೆಗಳನ್ನು ನಡೆಸುವುದಕ್ಕೆ ಆಯೋಗದ ಆಕ್ಷೇಪವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ಗಳು ಯಾವುದೇ ಹೊಸ ನೀತಿ ನಿರ್ಧಾರಗಳನ್ನು ಘೋಷಿಸುವಂತಿಲ್ಲ.
*ಪ್ರತಿನಿತ್ಯದ ಆಗು-ಹೋಗುಗಳಿಗೆ ಸಂಬಂಧಿಸಿದ ನಿರ್ವಹಣೆಗಳನ್ನು ಮಾಡಲು ಸಭೆ ನಡೆಸಬಹುದು, ತುರ್ತು ವಿಷಯಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
*ರಾಜಕೀಯ ಲಾಭ ಪಡೆದುಕೊಳ್ಳುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಂತಿಲ್ಲ. ಈ ಷರತ್ತಿಗೆ ಒಳಪಟ್ಟು ಸಭೆಗಳನ್ನು ನಡೆಸಬಹುದು. ಅಂತಹ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸಭೆಗಳನ್ನು ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಂಡ ಅನಂತರವಷ್ಟೇ ನಡೆಸಬೇಕು.