ಮಂಗಳೂರು(ಕೊಚ್ಚಿ): ಎಂಜಿನ್‌ಗೆ ನೀರು ನುಗ್ಗಿ ಸಮುದ್ರ ಮಧ್ಯೆ ಸಿಲುಕಿದ್ದ ಕೇರಳದ 13 ಮಂದಿ ಮೀನುಗಾರರು ಹಾಗೂ ಅವರ ದೋಣಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ಭದ್ರತಾಪಡೆ ಬುಧವಾರ ತಿಳಿಸಿದೆ.
ಚಾವಕ್ಕಾಡ್ ಕರಾವಳಿಯಿಂದ 31 ನಾಟಿಕಲ್ ಮೈಲಿ ದೂರದಲ್ಲಿ ಸಿಲುಕಿದ್ದ ಮೀನುಗಾರಿಕಾ ದೋಣಿ ಹಾಗೂ ಅದರಲ್ಲಿದ್ದ 13 ಮಂದಿ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕರಾವಳಿ ಭದ್ರತಾಪಡೆ, ‘ಕರಾವಳಿ ರಕ್ಷಣಾ ನೌಕೆ ‘ಅಭಿನವ್’, ಪ್ರತಿಕೂಲ ಹವಾಮಾನದ ಹೊರತಾಗಿಯೂ, ಕಠಿಣ ಪರಿಸ್ಥಿತಿಯಲ್ಲಿ ಮೀನುಗಾರಿಕಾ ಹಡಗಿಗೆ ತಾಂತ್ರಿಕ ಸಹಾಯವನ್ನು ಒದಗಿಸಿದೆ’ ಎಂದು ಹೇಳಿದೆ. ಕಾರ್ಯಾಚರಣೆಯಲ್ಲಿ 13 ಮಂದಿ ಮೀನುಗಾರರನ್ನು ರಕ್ಷಿಸಲಾಗಿದ್ದು, ದೋಣಿ ಮಂಬುರಂ ಬಂದರಿಗೆ ಸುರಕ್ಷಿತವಾಗಿ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದೆ.