ಮಂಗಳೂರು (ಹುಬ್ಬಳ್ಳಿ): ಬಸ್ ಮೇಲ್ಛಾವಣಿ ಸೋರದಿದ್ದರೂ ಕೊಡೆ ಹಿಡಿದು ಬಸ್ ಚಾಲನೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ ನಿರ್ವಾಹಕಿಯನ್ನು ಅಮಾನತುಗೊಳಿಸಲಾಗಿದೆ. ಚಾಲಕ ಹನುಮಂತಪ್ಪ ಕಿಲ್ಲೇದಾರ ಹಾಗೂ ನಿರ್ವಾಹಕಿ ಅನಿತಾ ಎಚ್. ಅಮಾನತಾದವರು. ಮೋಜಿಗಾಗಿ ಮಾಡಿದ ವಿಡಿಯೋ ಚಾಲಕ ಹಾಗೂ ನಿರ್ವಾಹಕರ ಸೇವೆಗೆ ಕುತ್ತು ತಂದಿದೆ.
ಮೇ.23ರಂದು ಉಪ್ಪಿನಬೆಟಗೇರಿ-ಧಾರವಾಡ ಮಾರ್ಗದಲ್ಲಿ ಬಸ್ ಹೋಗುತ್ತಿರುವಾಗ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದ ಕಾರಣ ಮನರಂಜನೆಗಾಗಿ ವಿಡಿಯೋ ಮಾಡಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಧಾರವಾಡ ವಿಭಾಗೀಯ ನಿಯಂತ್ರಣಾಧಿಕಾರಿ ಬಸ್‌ನ ವಾಸ್ತವತೆ ಕುರಿತು ವರದಿ ನೀಡಲು ವಿಭಾಗೀಯ ತಾಂತ್ರಿಕ ಶಿಲ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳು ವಾಹನ ತಪಾಸಣೆ ಮಾಡಿ, ಚಾಲಕ ಕುಳಿತುಕೊಳ್ಳುವ ಸ್ಥಳ ಅಥವಾ ಇತರೆ ಯಾವುದೇ ಭಾಗದಲ್ಲಿ ಮಳೆಯಿಂದ ಬಸ್ ಮೇಲ್ಛಾವಣಿ ಸೋರುತ್ತಿರಲಿಲ್ಲ ಎನ್ನುವ ಪರಿಶೀಲನಾ ವರದಿ ಸಲ್ಲಿಸಿದ್ದರು.
ವಿಡಿಯೋ ಚಿತ್ರೀಕರಣವನ್ನು ಮೇ.23ರಂದು ಮಾಡಿದ್ದಾರೆ. ನಮ್ಮ ಗಮನಕ್ಕೆ 24ರಂದು ಬಂದಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳನ್ನು ಕರೆದು ವಾಹನ ಪರಿಶೀಲನೆಗೆ ಸೂಚಿಸಿದ್ದೆ. ವಾಹನದಲ್ಲಿ ಅಂತಹ ನ್ಯೂನತೆ ಇರಲಿಲ್ಲ ಎಂದು ವರದಿ ನೀಡಿದ್ದಾರೆ. ಚಾಲಕನನ್ನು ಕರೆಯಿಸಿ ವಿಚಾರಿಸಿದಾಗ ಮನರಂಜನೆಗಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೈಲಿ ಛತ್ರಿ ಹಿಡಿದು ವಾಹನ ಚಾಲನೆ ಮಾಡುವುದನ್ನು ಚಿತ್ರೀಕರಿಸೊಕ್ಕೆ ನಿರ್ವಾಹಕಿ ಸಾಥ್ ಕೊಟ್ಟಿದ್ದಾರೆ. ಇದೆಲ್ಲದರ ಹಿಂದೆ ಸಮಸ್ಯೆ ತೋರಿಸುವುದಕ್ಕಿಂತ ಹೆಚ್ಚಾಗಿ ಸಂಸ್ಥೆ ಮಾನ ಹರಾಜು ಹಾಕುವ ದುರುದ್ದೇಶ ಅಡಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಡತೆ ಮತ್ತು ಶಿಸ್ತು ನಿಬಂಧನೆಗಳು-1971 ರ 18ನೆ ನಿಬಂಧನೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುವುದಲ್ಲದೇ ತತ್ ಕ್ಷಣಕ್ಕೆ ಅನ್ವಯವಾಗುವಂತೆ ಇಬ್ಬರನ್ನೂ ಕರ್ತವ್ಯಲೋಪದ ಆಪಾದನೆ ಮೇರೆಗೆ ಅಮಾನತುಪಡಿಸಲಾಗಿದೆ.