ರಾಜ್ಯದಲ್ಲಿ ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ – ಸರಕಾರದ ವಿರುದ್ಧ ಹರಿಹಾಯ್ದ ಬಿ.ವೈ.ವಿಜಯೇಂದ್ರ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗಿದೆ. ಇವರ ಆಡಳಿತ ವೈಖರಿ ನೋಡಿದರೆ ಸರ್ಕಾರ ಇದೆ ಅನಿಸ್ತಿಲ್ಲ. ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಆಗ್ತಿಲ್ಲ. ಒಂದೇ ಒಂದು ಗುದ್ದಲಿಪೂಜೆ ಆಗ್ತಿಲ್ಲ. ಕಾಂಗ್ರೆಸ್ ಎನ್ಇಪಿಯಲ್ಲೂ ಮೊಸರಲ್ಲಿ‌ ಕಲ್ಲು ಹುಡುಕಿ ರಾಜ್ಯದಲ್ಲಿ ‌ಪ್ರತ್ಯೇಕ ಎಸ್ಇಪಿ ತರುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಹದಗೆಡಿಸಿದೆ. ಅಭಿವೃದ್ಧಿ ‌ಮರೀಚಿಕೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದರು.

ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಬಿಜೆಪಿಯಿಂದ ನಗರದ ಡೊಂಗರಕೇರಿಯ ಸುಧೀಂದ್ರ ಸಭಾಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸಿಗರ ಅಲ್ಪಸಂಖ್ಯಾತ ‌ತುಷ್ಟೀಕರಣ ನೀತಿಯಿಂದ ದಾವಣಗೆರೆಯಲ್ಲಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ನಡೆದಿದೆ. ಇವರ ದುಸ್ಸಾಹಸಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರೋದೇ ಕಾರಣ. ಏನೇ ಮಾಡಿದ್ರೂ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತೆ ಅನ್ನುವ ನಂಬಿಕೆ ಅವರಿಗಿದೆ. ಪರಿಣಾಮ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ ಓರ್ವ ನುರಿತ ರಾಜಕಾರಣಿ. ಅವರ ಮಾತುಗಳು ಕೇಳ್ತಿದ್ರೆ ಅವರು ಬಾಲ್ಯದಲ್ಲಿ ಸ್ವಯಂ ಸೇವಕ ಆಗಿರಬೇಕು ಅನಿಸುತ್ತದೆ‌. ಡಾ.ಧನಂಜಯ ಸರ್ಜಿ ಹೊಟ್ಟೆ ಪಾಡಿಗಾಗಿ ರಾಜಕಾರಣಕ್ಕೆ ಬಂದವರಲ್ಲ. ಅವರು ಮಾಡಿರುವ ಸೇವೆಯ ಕಾರಣಕ್ಕೆ ಜನರು ಅವರನ್ನು ಗುರುತಿಸಿದ್ದಾರೆ. ವಿಧಾನಪರಿಷತ್ ಚುನಾವಣೆಯ ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಅನೇಕ ಹಿರಿಯರು ಸ್ಥಾನದ ಅಪೇಕ್ಷೆ ಪಟ್ಟಿದ್ದರು‌. ಆದರೆ ಪಕ್ಷದ ವರಿಷ್ಠರ ತೀರ್ಮಾನದಂತೆ ಇಬ್ಬರಿಗೆ ಟಿಕೆಟ್ ನೀಡಲಾಗಿದೆ. ಕೆಲವರು ಗೆದ್ದರೆ ಮತ್ತೆ ಪಕ್ಷಕ್ಕೆ ವಾಪಸ್ ಬರ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇಂಥಹ ಮಾತುಗಳಿಗೆ ಇಲ್ಲಿನ ಪ್ರಬುದ್ಧ ಮತದಾರರು‌‌ ಮರಳಾಗಲ್ಲ‌ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

LEAVE A REPLY

Please enter your comment!
Please enter your name here