ಮಂಗಳೂರು: ಬಿಜೆಪಿ ದೇಶದಲ್ಲಿ ಒಂದು ಸಿದ್ದಾಂತವನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ. ಆದ್ರೆ ಕರ್ನಾಟಕದಲ್ಲಿ ಇದಕ್ಕೆ ತಿಲಾಂಜಲಿ ಇಟ್ಟು ಬಿಜೆಪಿ ನಡೆದುಕೊಳ್ಳುತ್ತಿದೆ ಎಂದು ಹೇಳಿರುವ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ರಾಜ್ಯ ಬಿಜೆಪಿ ವಿರುದ್ಧ ಮತ್ತೆ ಗುಡುಗಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಯಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ದ ವಾಗ್ದಾಳಿ ನಡೆಸಿದರು. ದೇಶದಲ್ಲಿ ರಾಮ ಲಕ್ಷ್ಮಣರ ರೂಪದಲ್ಲಿ ನರೇಂದ್ರ ಮೋದಿ ಅಮಿತ್ ಶಾ ಕೆಲಸ ಮಾಡ್ತಿದ್ದಾರೆ. ಪಕ್ಷವನ್ನು ಒಂದು ಕುಟುಂಬದಿಂದ ಮುಕ್ತ ಮಾಡಬೇಕು ಎಂದು ನರೇಂದ್ರ ಮೋದಿ ಹೇಳ್ತಿದ್ದಾರೆ. ಆದ್ರೆ ಕಾಂಗ್ರೆಸ್ ಸಂಸ್ಕೃತಿ ಕರ್ನಾಟಕ ಬಿಜೆಪಿಯಲ್ಲಿ ಬಂದಿರೋದು ನೋವು ತಂದಿದೆ. ಕುಟುಂಬ ಸಂಸ್ಕೃತಿಯನ್ನು ಮುಕ್ತ ಮಾಡಬೇಕು. ರಾಜ್ಯ ಬಿಜೆಪಿಯಲ್ಲಿ ಅಪ್ಪ ಮಕ್ಕಳು ಹೇಳಿದಾಗೆ ನಡೀತಾ ಇದೆ. ಕಾರ್ಯಕರ್ತರು ಬಹಳ ಸಂಕಟದಲ್ಲಿದ್ದಾರೆ. ರಾಷ್ಟೀಯತೆಯಿಂದ ಜಾತೀಯತೆಗೆ ಬಿಜೆಪಿ ತಿರುಗಿಬಿಟ್ಟಿದೆ. ಸಾಮೂಹಿಕ ನೇತ್ರತ್ವದಿಂದ ಸರ್ವಾಧಿಕಾರಿ ಸಿದ್ದಾಂತಕ್ಕೆ ಹೋಗಿದೆ. ಇದಕ್ಕಾಗಿಯೇ ನಾನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರೋದು ಎಂದು ಹೇಳಿದರು.
ರಘುಪತಿ ಭಟ್ ಅವರ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇವೆ. ಇದೊಂದು ವಿಶೇಷವಾದ ಚುನಾವಣೆ. 30 ವರ್ಷದಿಂದ ನನ್ನ ಜೊತೆಗೆ ಕೆಲಸ ಮಾಡಿದ ರಘುಪತಿ ಭಟ್ ಗೆ ನೋವಾಗಿದೆ. 42 ದಿನ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕಾಗಿ ನನ್ನ ಜೊತೆ ಕೆಲಸ ಮಾಡಿದ್ರು. ಕಾಂಗ್ರೆಸ್ ಗೆ ಹೋಗಬೇಕೆಂದವರಿಗೆ ಬಿಜೆಪಿ ಟಿಕೇಟ್ ನೀಡಲಾಗಿದೆ. ಜಾತಿ, ಹಣ ಬಲದ ಆಧಾರದಲ್ಲಿ ಇತ್ತಿಚೇಗೆ ಪಕ್ಷ ಸೇರಿದ ವ್ಯಕ್ತಿಗೆ ಎಂ.ಎಲ್.ಸಿ ಟಿಕೇಟ್ ನೀಡಿದ್ದಾರೆ. ಮಗನಿಗೆ ಅನುಕೂಲ ಆಗಲೆಂದು ಯಡಿಯೂರಪ್ಪ ಅವರಿಗೆ ಟಿಕೇಟ್ ನೀಡಿದ್ದಾರೆ. ಇದನ್ನು ಸಹಿಸದೆ ರಘುಪತಿ ಭಟ್ ಚುನಾವಣೆಗೆ ಸ್ಪರ್ಧೆ ಮಾಡ್ತಿದ್ದಾರೆ. ಬಿಜೆಪಿಯ ಕಾರ್ಯಕರ್ತರು ರಘುಪತಿ ಭಟ್ ಗೆ ನೇರ ಬೆಂಬಲ ಕೊಡ್ತಿದ್ದಾರೆ. ಇನ್ನು ಕೆಲವರು ಆಂತರಿಕವಾಗಿ ಬೆಂಬಲ ಕೊಡೋದಾಗಿ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಾರು ಯಡಿಯೂರಪ್ಪ ಜೊತೆ ಹೋಗ್ತಾರೆ ಅವರಿಗೆ ಟಿಕೇಟ್ ಎಂಬಂತಾಗಿದೆ. ನಮಗೆಲ್ಲರಿಗೂ ಪಕ್ಷ ತಾಯಿ ಸ್ಥಾನ. ತಾಯಿ ಸ್ಥಾನಕ್ಕೆ ಬಂದಿರುವ ಈ ಪರಿಸ್ಥಿತಿ ಮುಕ್ತ ಆಗಬೇಕು. ಅಪ್ಪ ಮಕ್ಕಳದ್ದೇ ಪಕ್ಷ ಎಂಬುದನ್ನು ಮುಕ್ತ ಮಾಡಬೇಕು. ತಾಯಿಯ ಬುಡವೇ ಅಲ್ಲಾಡುತ್ತಿದೆ. ಹಿಂದುತ್ವ ಹೋಗಿ ಜಾತೀಯತೆ ಬರ್ತಿದೆ. ಈ ಚುನಾವಣೆಯಲ್ಲಿ ರಘುಪತಿ ಭಟ್ ನೂರಕ್ಕೆ ನೂರು ಗೆಲ್ಲುತ್ತಾರೆ. ಸ್ವಾರ್ಥಿಗಳ ಕೈಯಲ್ಲಿ ಪಕ್ಷ ಸೇರುತ್ತಿದೆ. ಬಿಜೆಪಿ ಶುದ್ದೀಕರಣ ಆಗಬೇಕಿದೆ ಎಂದು ಅವರು ಹೇಳಿದರು.
ಬಿಜೆಪಿ ಶಾಸಕರಾದ ಸೋಮಶೇಖರ್, ಶಿವರಾಂ ಹೆಬ್ಬಾರ್ ಪಕ್ಷ ವಿರೋಧಿ ಚಟುವಟಿಕೆ ವಿಚಾರವಾಗಿ ಇನ್ನು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಒಬ್ಬ ಬಚ್ಛಾ ಇದ್ದಾನೆ. ಸೋಮಶೇಖರ್ ಮತ್ತು ಹೆಬ್ಬಾರ್ ನ್ನು ಏನು ಮಾಡ್ತೀರಿ ಎಂದು ಕೇಳಿ. ಅವರನ್ನು ಕೇಳಿದ್ರೆ ಗೊತ್ತಾಗಬಹುದು. ಬಿಜೆಪಿ ಇಡೀ ದೇಶದಲ್ಲಿ ಸಿದ್ದಾಂತ ಇಟ್ಟು ಕೆಲಸ ಮಾಡುತ್ತಿದೆ. ಅವರ ಸಿದ್ದಾಂತಕ್ಕೆ ಕರ್ನಾಟಕದಲ್ಲಿ ತಿಲಾಂಜಲಿ ಇಡಲಾಗುತ್ತಿದೆ. ಮೋದಿ, ಅಮಿತ್ ಶಾ, ರಾಮ ಲಕ್ಷ್ಮಣರ ರೀತಿಯಲ್ಲಿ ವಿಶ್ವ ನಾಯಕರಾಗಿ ಮುಂದುವರಿದಿದ್ದಾರೆ. ಕರ್ನಾಟಕದ ಬಿಜೆಪಿಯಲ್ಲಿ ಕಾಂಗ್ರೆಸ್ ಸಂಸ್ಕೃತಿ ಬಂದಿದೆ. ಕುಟುಂಬದ ರಾಜಕಾರಣವನ್ನು ಕರ್ನಾಟದಿಂದ ಮುಕ್ತ ಮಾಡಬೇಕು ಎನ್ನುವವರಿಗೆ ನೋವಾಗಿದೆ. ಯಡಿಯೂರಪ್ಪ ಮನೆಯಲ್ಲಿ ಎಲ್ಲರೂ ಅಧಿಕಾರದಲ್ಲಿ ಇದ್ದಾರೆ. ನಾವೆಲ್ಲ ಸಾಮೂಹಿಕ ನೇತೃತ್ವದಲ್ಲಿ ಪಕ್ಷ ಕಟ್ಟಿದ್ದೇವೆ. 108 ಸ್ಥಾನದವರೆಗೆ ರೈತ ಹೋರಾಟ, ಹಿಂದುತ್ವದ ವಿಚಾರದಿಂದ ಗೆದ್ದು ಬಂದಿದ್ದೇವೆ. ಪಕ್ಷ ನಿಷ್ಠೆ ಕಡಿಮೆಯಾಗಿ 66 ಸ್ಥಾನಕ್ಕೆ ಬಂದಿದ್ದೇವೆ. ಯಡಿಯೂರಪ್ಪ ಪಕ್ಷವನ್ನು ಹಿಡಿತದಲ್ಲಿ ಇಡುವವಾಗ ನಾವು ಸುಮ್ಮನೆ ಕೂರಬಾರದು. ಬಿಜೆಪಿ ಉಳಿಸಲು ಹೋರಾಟ ಮಾಡಬೇಕು. ಈ ಚುನಾವಣೆಯಲ್ಲಿ ನೂರಕ್ಕೆ ನೂರು ರಘುಪತಿ ಭಟ್ ಗೆದ್ದೇ ಗೆಲ್ಲುತ್ತಾರೆ. ರಘುಪತಿ ಭಟ್ ಹಾಗೂ ನನಗೆ ಆದ ಅವಮಾನ ಇಡೀ ರಾಜ್ಯ ಗಮನಿಸುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿಯ ಶುದ್ದೀಕರಣ ಆಗಬೇಕು ಎಂದು ಈಶ್ವರಪ್ಪ ಹೇಳಿದರು.
ಪ್ರಜ್ವಲ್ ಪ್ರಕರಣದಿಂದ ದೇಶದಲ್ಲಿ ಕರ್ನಾಟಕ ತಲೆ ತಗ್ಗಿಸುವಂತೆ ಆಗಿದೆ. ಕಾಂಗ್ರೆಸ್ ಗೂ ಇದಕ್ಕೂ ಸಂಬಂಧ ಇಲ್ಲವೆಂದು ಡಿಕೆಶಿ ಹೇಳುತ್ತಾರೆ. ಕುಮಾರಸ್ವಾಮಿ ನನಗೆ ಸಂಬಂಧವೇ ಇಲ್ಲ ಅಂತಾರೆ. ಇದನ್ನು ಸಿಬಿಐಗೆ ಕೊಟ್ಟು ತನಿಖೆ ನಡೆಸಬೇಕು. ಎಸ್‌ಐಟಿ ತನಿಖೆ ಸಿಎಂ, ಡಿಸಿಎಂ, ಗೃಹ ಮಂತ್ರಿ ಹೇಳಿದ್ದಂತೆ ಇರುತ್ತೆ ಅಷ್ಟೇ ಎಂದ ಅವರು, ಮಂಗಳೂರಿನ ಕಂಕನಾಡಿ ರಸ್ತೆಯಲ್ಲಿ ನಮಾಝ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಸ್ತೆಯಲ್ಲಿ ನಮಾಝ್ ಮಾಡಿದವರ ಮೇಲೆ ಸೂಕ್ತ ಕ್ರಮ ಆಗಲಿ ಎಂದು ಆಗ್ರಹಿಸಿದರು. ದೇಶದ ಶಾಂತಿ ಕದಡುವ ಕಾರ್ಯ ಆಗ್ತಾ ಇದೆ. ಈ ರೀತಿಯ ಕೃತ್ಯದಿಂದ ದೇಶದ ಎಲ್ಲ ಮುಸ್ಲಿಂ ಸಮುದಾಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಸರ್ಕಾರ ಈ ರೀತಿಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಈ ತುಷ್ಟಿಕರಣ ನೀತಿ ನಿಮ್ಮನ್ನು ಸುಡಲಿದೆ ಎಂದು ಹೇಳಿದ ಈಶ್ವರಪ್ಪ ರಾಜ್ಯ ಸರಕಾರದ ವಿರುದ್ಧ ಕಿಡಿಕಾರಿದರು.