ಮಂಗಳೂರು(ಕನ್ಯಾಕುಮಾರಿ): ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಕಳೆದ ಮೂರ್ನಾಲ್ಕು ತಿಂಗಳಿಂದ ದೇಶಾದ್ಯಂತ ಸಂಚರಿಸುತ್ತಿರುವ ಪ್ರಧಾನಿ ಮೋದಿ ಕೊನೇ ಹಂತದ ಚುನಾವಣಾ ಪ್ರಚಾರ ಮುಗಿಯುತ್ತಿದ್ದಂತೆ ವಿಶ್ರಾಂತಿಗಾಗಿ ಮೋದಿ ಆಧ್ಯಾತ್ಮದತ್ತ ಮುಖ ಮಾಡಲಿದ್ದಾರೆ.
ಮೇ 31ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಸ್ಥಳದಲ್ಲಿಯೇ ವಿವೇಕಾನಂದ ರಾಕ್ ಮೆಮೋರಿಯಲ್ ಹಾಲ್ನಲ್ಲಿ ಪ್ರಧಾನಿ ಮೋದಿ 48 ಗಂಟೆಗಳ ಧ್ಯಾನ ಮಾಡಲಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ. ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದ ಮೇಲೆ ದೊಡ್ಡ ಪ್ರಭಾವ ಬೀರಿತು. ಗೌತಮ ಬುದ್ಧನ ಜೀವನದಲ್ಲಿ ಸಾರನಾಥಕ್ಕೆ ವಿಶೇಷ ಸ್ಥಾನವಿದೆ ಎಂದು ಜನರು ನಂಬುತ್ತಾರೆ. ಈ ಬಂಡೆಯು ಸ್ವಾಮಿ ವಿವೇಕಾನಂದರ ಜೀವನದಲ್ಲಿಯೂ ಸಹ ಅದೇ ಸ್ಥಾನವನ್ನು ಹೊಂದಿದೆ. ಸುಂದರವಾದ ವಿವೇಕಾನಂದ ರಾಕ್ ಸ್ಮಾರಕವು ದೇಶದ ದಕ್ಷಿಣದ ತುದಿಯಾದ ಕನ್ಯಾಕುಮಾರಿ ಕರಾವಳಿಯ ಮಧ್ಯ ಸಮುದ್ರದ ಮಧ್ಯದಲ್ಲಿ ತಮಿಳು ಸಂತ ತಿರುವಳ್ಳುವರ್ ಅವರ ಏಕಶಿಲೆಯ ಪ್ರತಿಮೆಯ ಸಮೀಪದಲ್ಲಿದೆ. ಪ್ರಧಾನಿ ಗುರುವಾರ(ಮೇ.30) ಸಂಜೆ ಇಲ್ಲಿಗೆ ಆಗಮಿಸಲಿದ್ದು, ಜೂನ್ 1 ರಂದು ದೆಹಲಿಗೆ ತೆರಳುವ ಸಾಧ್ಯತೆ ಇದೆ.