ಮಂಗಳೂರು(ಚೆನ್ನೈ): ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ಆಚಮಂಗಲಂ ಗ್ರಾಮದ ವ್ಯಕ್ತಿಯೊಬ್ಬರ ಕೃಷಿ ಭೂಮಿಯಲ್ಲಿ ಇದ್ದಕ್ಕಿದ್ದಂತೆ ಭಾರೀ ಗುಂಡಿಯೊಂದು ಸೃಷ್ಟಿಯಾಗಿದೆ.
ಈ ಗುಂಡಿಯಿಂದ ಬಿಸಿ ಶಾಖ ಹೊರಬರುತ್ತಿದ್ದು, ಆತಂಕಗೊಂಡ ಭೂಮಿಯ ಮಾಲೀಕ, ಕೃಷಿಕ ಜಿಲ್ಲೆಯ ಪೊಲೀಸ್ ಅಧಿಕಾರಿಗಳನ್ನು ಮತ್ತು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾನೆ. ಕೃಷಿ ಭೂಮಿಯಲ್ಲಿ ಇದ್ದಕ್ಕಿದ್ದಂತೆ ಸೃಷ್ಟಿಯಾದ ಐದು ಅಡಿ ಆಳದ ಗುಂಡಿಯಿಂದ ಶಾಖವು ಹೊರಹೊಮ್ಮುತ್ತಿದೆ ಎಂಬ ವಿಷಯ ತಿಳಿಯುತ್ತಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಹೊಂಡದ ಆಳದಿಂದ ಮಾದರಿಗಳನ್ನು ಸಂಗ್ರಹಿಸಿ ಹೆಚ್ಚಿನ ವಿಶ್ಲೇಷಣೆಗಾಗಿ ವೆಲ್ಲೂರು ಮತ್ತು ಚೆನ್ನೈ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ನಾವು ರಂಧ್ರ ಮತ್ತು ಸುತ್ತಮುತ್ತಲಿನ ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಇದು ನೆಲಕ್ಕೆ ಅಪ್ಪಳಿಸಿದ ಉಲ್ಕಾಶಿಲೆಯಾಗಿದೆ. ಇದು ಮಂಗಳ ಮತ್ತು ಗುರು (ಗ್ರಹಗಳು) ನಡುವಿನ ಕ್ಷುದ್ರಗ್ರಹ ಸಾಲಿನಿಂದ ಇಲ್ಲಿಗೆ ಬಂದಿರಬಹುದು ಎಂದು ಜಿಲ್ಲಾ ವಿಜ್ಞಾನ ಅಧಿಕಾರಿ ರವಿ ಹೇಳಿದ್ದಾರೆ. ಹೆಚ್ಚಿನ ಪರಿಶೀಲನೆಗಾಗಿ ಮಾದರಿಗಳನ್ನು ಅಹಮದಾಬಾದಿಗೂ ಕಳುಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.