ಮಂಗಳೂರು(ಬೆಂಗಳೂರು): ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹುದ್ದೆಗೆ ನೇಮಿಸಲಾಗಿದ್ದ ಮಾಜಿ ಎಂಎಲ್ಸಿ ಅಬ್ದುಲ್ ಅಜೀಂ ಅವರ ನಾಮನಿರ್ದೇಶನ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದ್ದು, ಸರ್ಕಾರದ ನಡೆಯನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆಯ ಸೆಕ್ಷನ್ 4ರ ಪ್ರಕಾರ ಸ್ವತಃ ಅಧ್ಯಕ್ಷರು ಸರ್ಕಾರದ ನಿರ್ಧಾರಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತಾರೆ ಎಂದು ಸೂಚಿಸುತ್ತದೆ ಎಂಬ ಸರ್ಕಾರದ ವಾದವನ್ನು ಒಪ್ಪಿಕೊಂಡ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಸರ್ಕಾರದ ಅಧೀನದಲ್ಲಿರುವ ಆಯೋಗಗಳಿಗೆ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡುವುದು ಮತ್ತು ವಾಪಸ್ ಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮ ನಿರ್ದೇಶನ ಹಿಂಪಡೆದಿದೆ ಎಂಬ ಕಾರಣವೊಡ್ಡಿ ಸರ್ಕಾರದ ಕ್ರಮ ಪ್ರಶ್ನಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಅಜೀಂ ಅವರನ್ನು 2019 ರಲ್ಲಿ ಆಗಿನ ಬಿಜೆಪಿ ಸರ್ಕಾರವು ಮೂರು ವರ್ಷಗಳ ಅವಧಿಗೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿತ್ತು. 2022 ರಲ್ಲಿ ಅವರ ಅಧಿಕಾರಾವಧಿಯನ್ನು ಇನ್ನೂ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಯಿತು. ಅದರಂತೆ 2025ರ ಅಕ್ಟೋಬರ್ 15 ರಂದು ಅವಧ ಅಧಿಕಾರವಧಿ ಕೊನೆಗೊಳ್ಳಬೇಕಿತ್ತು. 2023ರ ಮೇನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ್ದ ಎಲ್ಲ ನಾಮನಿರ್ದೇಶನಗಳನ್ನು ರದ್ದುಗೊಳಿಸಿತು. ಅದರಂತೆ, ಅಜೀಂ ಅವರ ನಾಮ ನಿರ್ದೇಶನವನ್ನು ಹಿಂಪಡೆಯಲಾಯಿತು. ಅಜೀಂ ಅವರು ಇನ್ನೂ 2 ವರ್ಷ ಮತ್ತು 5 ತಿಂಗಳ ಅವಧಿಗೆ ಅಧ್ಯಕ್ಷರಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ಮಾಡಿಕೊಡುವಂತೆ 2023ರ ಮೇನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇದನ್ನು ಪರಿಗಣಿಸಲು ವಿಳಂಬವಾದಾಗ ಅವರು ಹೈಕೋರ್ಟ್ ಮೊರೆ ಹೋಗಿದ್ದರು.