ಎಲ್‌ಆರ್‌ಟಿ ಭೂಮಿಗೆ ಎಸ್‌ಸಿ ಎಸ್‌ಟಿ ಪಿಟಿಸಿಎಲ್ ಕಾಯ್ದೆ ಅನ್ವಯಿಸದು-ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಮಂಗಳೂರು(ಬೆಂಗಳೂರು): ಭೂ ಸುಧಾರಣಾ ಕಾಯ್ದೆಯಡಿ ಭೂ ನ್ಯಾಯಮಂಡಳಿಯಿಂದ ಮಂಜೂರಾದ ಭೂಮಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಭೂ ಪರಭಾರೆ ನಿಷೇಧ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್‌ನ ಕಲ್ಬುರ್ಗಿ ವಿಭಾಗೀಯ ಪೀಠದ ನ್ಯಾ.ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ವಿವರ:
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾಗಪ್ಪ ಎಂಬವರಿಗೆ 1976ರಲ್ಲಿ ಎಸ್‌ಸಿ ವಿಭಾಗದಲ್ಲಿ ಐದು ಎಕರೆ ಜಮೀನು ಮಂಜೂರಾಗಿತ್ತು. ಆರು ವರ್ಷಗಳ ವರೆಗೆ ಯಾರಿಗೂ ಪರಭಾರೆ ಮಾಡಬಾರದು ಎಂಬ ಷರತ್ತಿನೊಂದಿಗೆ ಈ ಜಮೀನು ಮಂಜೂರು ಮಾಡಲಾಗಿತ್ತು. 2004ರಲ್ಲಿ ನಾಗಪ್ಪ ಅವರು ತಮ್ಮ ಐದು ಎಕರೆ ಜಾಗದಲ್ಲಿ ಮೂರು ಎಕರೆಯನ್ನು ಶಂಕರಪ್ಪ ಎಂಬವರಿಗೆ ಮಾರಾಟ ಮಾಡಿದ್ದರು. ನಾಗಪ್ಪ ಅವರು ಮೃತಪಟ್ಟ ಬಳಿಕ ಅವರ ಮಕ್ಕಳು ಈ ಭೂಮಿಯನ್ನು ತಮಗೆ ದೊರಕಿಸಬೇಕು ಎಂದು ಸಹಾಯಕ ಆಯುಕ್ತರಲ್ಲಿ ಮೊರೆ ಹೋದರು. 2014ರಲ್ಲಿ ಈ ಮನವಿಯನ್ನು ಸಹಾಯಕ ಆಯುಕ್ತರು ಪುರಸ್ಕರಿಸಿದರು. ಈ ಆದೇಶವನ್ನು ಪ್ರಶ್ನಿಸಿ ಬಾಧಿತರಾದ ಶಂಕರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದರು. ಎರಡು ವರ್ಷಗಳ ಬಳಿಕ ಆ ಮನವಿಯನ್ನು ಡಿಸಿ ತಿರಸ್ಕರಿಸಿದರು. ಈ ಎರಡೂ ಆದೇಶಗಳನ್ನು ಪ್ರಶ್ನಿಸಿ ಶಂಕರಪ್ಪ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಈ ಜಮೀನು ಎಲ್‌ಆರ್‌ಟಿ ಮಂಜೂರಾತಿ ಪಡೆದ ಜಾಗ ಆದ ಕಾರಣ ಇದು ಪಿಟಿಸಿಎಲ್ ಕಾಯ್ದೆಗೆ ಒಳಪಟ್ಟ ಜಮೀನು ಅಲ್ಲ ಎಂದು ಶಂಕರಪ್ಪ ಅವರು ವಾದಿಸಿದ್ದರು. ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಈ ಅಂಶವನ್ನು ಪರಿಗಣಿಸದೆ ಆದೇಶ ನೀಡಿದ್ದು, ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಹೇಳಿದ್ದರು.

ಮಂಜೂರಾದ 28 ವರ್ಷಗಳ ಬಳಿಕ ಕ್ರಯ ಸಾಧನ ಜಾರಿಯಾಗಿರುವುದರಿಂದ ಎಲ್‌ಆರ್‌ಟಿ ಷರತ್ತುಗಳನ್ನು ನೆರವೇರಿಸಲಾಗಿದೆ. ಹಾಗಾಗಿ, ಆಸ್ತಿಯ ಮೇಲಿನ ತಮ್ಮ ಹಕ್ಕು ಸರಿಯಾಗಿದೆ ಎಂದು ಶಂಕರಪ್ಪ ವಾದಿಸಿದರು. ಈ ವಾದವನ್ನು ಪರಿಗಣಿಸಿದ ಮಾನ್ಯ ನ್ಯಾಯಪೀಠ, ಎಲೀನೇಷನ್ ಅವಧಿ ಮುಗಿದ ಬಳಿಕ ಮಂಜೂರಾತಿದಾರರು ಈ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಮತ್ತು ಒಡೆತನ ಹೊಂದುತ್ತಾರೆ. ಆ ಬಳಿಕ ಅದನ್ನು ಮಾರಾಟ ಮಾಡಲು ಸಂಪೂರ್ಣ ಅಧಿಕಾರ ಪಡೆಯುತ್ತಾರೆ ಎಂದು ಹೇಳಿತು. ಭೂ ನ್ಯಾಯ ಮಂಡಳಿ (LRT) ಮಂಜೂರು ಮಾಡಿದ ಭೂಮಿಗೆ ಎಸ್‌ಸಿ ಎಸ್‌ಟಿ ಪಿಟಿಸಿಎಲ್ ಕಾಯ್ದೆ ಅನ್ವಯಿಸದು. ಆದರೆ, ದುರದೃಷ್ಟವಶಾತ್ ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಈ ಅಂಶವನ್ನು ಪರಿಗಣಿಸಿಲ್ಲ ಎಂದು ತನ್ನ ತೀರ್ಪಿನಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here