ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತೊಮ್ಮೆ ಅಭೂತಪೂರ್ವ ಜಯ ದೊರೆತಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಮುಂದೆ ಕ್ಯಾ.ಬ್ರಿಜೇಶ್ ಚೌಟರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ಮುಂದುವರಿಯುವ ವಿಶ್ವಾಸವಿದೆ ಎಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಕಟೀಲ್, ರಾಜ್ಯದಲ್ಲಿ ನಿರೀಕ್ಷೆಯಂತೆ ಬಿಜೆಪಿ 17 ಕ್ಷೇತ್ರದಲ್ಲಿ ಜಯಗಳಿಸಿದೆ. ದೇಶದಲ್ಲಿ ಎನ್ ಡಿಎ ನೇತೃತ್ವದ ಸರಕಾರ ರಚನೆಯಾಗಲಿದೆ. 295 ಕ್ಷೇತ್ರಗಳಲ್ಲಿ ಮತದಾರರು ಎನ್ ಡಿಎ ಸರಕಾರವನ್ನು ಬೆಂಬಲಿಸಿದ್ದಾರೆ. ಇದರಿಂದಾಗಿ ಸರಳ ಬಹುಮತದೊಂದಿಗೆ ಮತ್ತೊಮ್ಮೆ ಎನ್ ಡಿಎ ಸರಕಾರ ಅಧಿಕಾರ ಪಡೆದಿದೆ ಎಂದು ಹೇಳಿದರು.
ಕೇರಳ ರಾಜ್ಯದಲ್ಲಿ ನಾನು ಚುನಾವಣಾ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತೇನೆ. ಈ ಬಾರಿ ಪ್ರಥಮ ಬಾರಿಗೆ ತ್ರಿಶೂರಿನಲ್ಲಿ ಬಿಜೆಪಿ ಖಾತೆ ತೆರೆದಿರುವುದಕ್ಕೆ ಕಾರಣರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸುದ್ದಿ ಗಾರರಿಗೆ ತಿಳಿಸಿದರು.