ಮಂಗಳೂರು(ಬೆಂಗಳೂರು): ಆದಾಯಕ್ಕಿಂತ ಶೇಕಡಾ 488 ರಷ್ಟು ಹೆಚ್ಚಿನ ಆಸ್ತಿ ಹೊಂದಿರುವ ಆರೋಪದಲ್ಲಿ ವಿಚಾರಣೆಗೊಳಗಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ತಮ್ಮ ಮತ್ತು ತಮ್ಮ ಕುಟುಂಬ ಸದಸ್ಯರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು ಎಂಬ ಮನವಿಯನ್ನು ಕರ್ನಾಟಕ ಹೈಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆ.
ಲೋಕಾಯುಕ್ತ ಪೊಲೀಸರು ಸಾಕಷ್ಟು ದಾಖಲೆಗಳನ್ನು ಕಲೆ ಹಾಕಿ ಆಳವಾದ ತನಿಖೆ ನಡೆಸಿದ ನಂತರವೇ ಆರೋಪಿ ಮತ್ತು ಆತನ ಕುಟುಂಬ ಸದಸ್ಯರ ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ. ಅರ್ಜಿದಾರರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಇರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಕುಂದಾಣ ಗ್ರಾಮ ಪಂಚಾಯತ್ ಪಿಡಿಓ ಪದ್ಮನಾಭ, ಆತನ ಪತ್ನಿ ಭವ್ಯ ಮತ್ತು ಆತನ ಅತ್ತೆ ಲಕ್ಷ್ಮಮ್ಮ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿತ್ತು. ಆರೋಪಿ ಮತ್ತು ಕುಟುಂಬ ಸದಸ್ಯರ ವಿರುದ್ಧ ಕಲೆ ಹಾಕಿದ ವಿವರಗಳು ಮೇಲ್ನೋಟಕ್ಕೆ ಸರಿ ಇದ್ದು, ಅಕ್ರಮ ಪತ್ತೆಯಾಗಿರುವ ಸಂಗತಿ ಹೇಳಲಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿತರಿಗೆ ಪರಿಹಾರ ಕಂಡುಕೊಳ್ಳಲು ಸಿಆರ್‌ಪಿಸಿಯಲ್ಲಿ ಹಲವು ಹಂತದ ಅವಕಾಶಗಳಿವೆ. ತನಿಖೆ ಪೂರ್ಣಗೊಳಿಸಿ ಆರೋಪ ಪಟ್ಟಿ ಸಲ್ಲಿಸಿ ನಂತರ ಸಿಆರ್‌ಪಿಸಿಯ ಸೆಕ್ಷನ್ 227, 239, 445ರಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ಆರೋಪಿತರು ತನಿಖೆ ಪೂರ್ಣಗೊಳ್ಳುವ ಮುನ್ನವೇ ಪ್ರಕರಣ ರದ್ದುಕೋರಿದ್ದಾರೆ ಎಂಬುದನ್ನು ನ್ಯಾಯಪೀಠ ಗಮನಿಸಿತು. ಸಿಆರ್‌ಪಿಸಿಯ ಸೆಕ್ಷನ್ 482ರ ಅಡಿಯಲ್ಲಿ ಹೈಕೋರ್ಟ್‌ಗೆ ನೀಡಿರುವ ಪ್ರದತ್ತ ಅಧಿಕಾರ ಬಳಸುವಾಗ ಅತ್ಯಂತ ವಿವೇಚನೆಯುಕ್ತವಾಗಿ ಚಿಂತನೆ ನಡೆಸುವಂತೆ ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ತೀರ್ಪು ನೀಡಿವೆ ಎಂಬುದನ್ನು ಉಲ್ಲೇಖಿಸಿದ ನ್ಯಾಯಪೀಠ, ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಿತು.