ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ – ಪ್ರಶಾಂತ್ ಕಿಶೋರ್

ಮಂಗಳೂರು/ನವದೆಹಲಿ: ಚುನಾವಣಾ ಫಲಿತಾಂಶದ ಕುರಿತು ತಾನು ಹೇಳಿದ್ದ ಭವಿಷ್ಯ ಸುಳ್ಳಾದ ಹಿನ್ನಲೆಯಲ್ಲಿ ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ ಎಂದು ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಘೋಷಣೆ ಮಾಡಿದ್ದಾರೆ.

 

ಚುನಾವಣಾ ಫಲಿತಾಂಶದ ಬಳಿಕ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್, ಇನ್ನು ಮುಂದೆ ಚುನಾವಣಾ ಭವಿಷ್ಯ ನುಡಿಯಲ್ಲ, ನಾನು ಮತ್ತು ನನ್ನಂತಹ ಸಮೀಕ್ಷೆಗಾರರು ಈ ಬಾರಿ ಚುನಾವಣೆಯನ್ನು ತಪ್ಪಾಗಿ ಗ್ರಹಿಸಿದ್ದೆವು. ಈ ಬಗ್ಗೆ ನಮ್ಮಿಂದಾಗಿರುವ ತಪ್ಪು ಲೆಕ್ಕಾಚಾರವನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಜೂ. 4 ರಂದು ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸುವ ಮೊದಲು, ಪ್ರಶಾಂತ್ ಕಿಶೋರ್ ಬಿಜೆಪಿ ತನ್ನ 2019 ರ ಚುನಾವಣಾ ಸಾಧನೆಯನ್ನು ಪುನರಾವರ್ತಿಸುತ್ತದೆ ಮತ್ತು ಸುಮಾರು 300 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆದರೆ ಫಲಿತಾಂಶ ಇದಕ್ಕೆ ತದ್ವಿರುದ್ಧವಾಗಿತ್ತು.

ಇದೇ ವೇಳೆ ದೇಶದ ಮುಂದಿನ ಚುನಾವಣೆಗಳಲ್ಲಿ ನೀವು ಅಂಕಿಅಂಶಗಳನ್ನು ಭವಿಷ್ಯ ನುಡಿಯುವುದನ್ನು ಮುಂದುವರಿಸುತ್ತೀರಾ ಎಂದು ಕೇಳಿದಾಗ, ಪ್ರಶಾಂತ್ ಕಿಶೋರ್, ಇಲ್ಲ, ನಾನು ಇನ್ನು ಮುಂದೆ ಯಾವ ಚುನಾವಣೆಯಲ್ಲೂ ಸ್ಥಾನಗಳ ಲೆಕ್ಕಾಚಾರವಾಗಲೀ ಭವಿಷ್ಯವನ್ನಾಗಲಿ ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಪ್ರತಿಪಕ್ಷಗಳ ಪರ ಜನರ ಒಲವು ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಇಲ್ಲ ಎಂದು ನಾನು ಹೇಳಿದ್ದೆ. ಅದರಂತೆ ಪೂರ್ವ ಮತ್ತು ದಕ್ಷಿಣದಲ್ಲಿ ಅವುಗಳು ಅಷ್ಟೇ ಹಿಂದಿನ ಚುನಾವಣೆಯಷ್ಟೇ ಸ್ಥಾನಗಳನ್ನು ಪಡೆದುಕೊಂಡು ಯಥಾಸ್ಥಿತಿ ಕಾಪಾಡಿಕೊಂಡಿವೆ. ನಿಸ್ಸಂಶಯವಾಗಿ, ನಾವು ತಪ್ಪು ಎಂದು ಸಾಬೀತಾಗಿದೆ. ಆದರೆ ನಂಬರ್‌ ಅನ್ನು ಹೊರತುಪಡಿಸಿ ಗಮನಿಸಿದಾಗ ನಾನು ಹೇಳಿರುವ ಎಲ್ಲಾ ಅಂಶಗಳು ನಿಜವಾಗಿದೆ. ಒಬ್ಬ ರಾಜಕೀಯ ವಿಶ್ಲೇಷಕನಾಗಿ, ತಂತ್ರಗಾರನಾಗಿ ಚುನಾವಣಾ ಭವಿಷ್ಯ ನುಡಿಯುವುದು ತಪ್ಪು. ಮುಂದೆಂದೂ ಅಂತಹ ತಪ್ಪು ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here