ಮಂಗಳೂರು (ಗುವಾಹತಿ): ಇದುವರೆಗೆ ಶಾಂತವಾಗಿದ್ದ ಮಣಿಪುರದ ಜಿರಿಬಮ್ ಜಿಲ್ಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಪರಿಚಿತ ಬಂದೂಕುಧಾರಿಗಳು ಎರಡು ಪೊಲೀಸ್ ಠಾಣೆಗಳು ಸೇರಿದಂತೆ ಹಲವು ಕಚೇರಿಗಳು ಮತ್ತು 70ಕ್ಕೂ ಹೆಚ್ಚು ಮನೆಗಳನ್ನು ಭಸ್ಮ ಮಾಡಿದ್ದಾರೆ. ಕಳೆದ ವರ್ಷದ ಮೇ ತಿಂಗಳಿನಿಂದ ಜನಾಂಗೀಯ ಸಂಘರ್ಷ ನಡೆಯುತ್ತಿದ್ದ ಮಣಿಪುರದಲ್ಲಿ ಈ ಮೂಲಕ ಹಿಂಸಾಚಾರ ಮರುಕಳಿಸಿದಂತಾಗಿದೆ.
ಜಿರಿಬಮ್ ಜಿಲ್ಲೆ ಮೀಟಿ, ನಾಗಾ, ಕುಕಿ ಮತ್ತು ಮಣಿಪುರಿ ಜನಾಂಗವನ್ನು ಹೊರತುಪಡಿಸಿ ಇತರರಿಂದ ಕೂಡಿದ ಜಿಲ್ಲೆಯಾಗಿದ್ದು, ಇದುವರೆಗೆ ಜನಾಂಗೀಯ ಹಿಂಸೆಗೆ ತುತ್ತಾಗಿರಲಿಲ್ಲ. ಆದರೆ 59 ವರ್ಷ ವಯಸ್ಸಿನ ಸೊಯಿಬಾಮ್ ಶರತ್ ಕುಮಾರ್ ಸಿಂಗ್ ಎಂಬ ವ್ಯಕ್ತಿಯ ಶವ ಲಾಮ್ತಾಯಿ ಖುನೊವ್ ಗ್ರಾಮದಲ್ಲಿ ಪತ್ತೆಯಾದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಜೂನ್ 6ರಂದು ಹೊಲಕ್ಕೆ ಹೋಗಿದ್ದ ಶರತ್ ಕುಮಾರ್ ಆ ಬಳಿಕ ನಾಪತ್ತೆಯಾಗಿದ್ದರು. ಮತ್ತೊಂದು ಸಮುದಾಯ ಅವರನ್ನು ಹತ್ಯೆ ಮಾಡಿದೆ ಎಂದು ಗ್ರಾಮಸ್ರು ಆರೋಪಿಸಿದ್ದಾರೆ. ಈ ಸಂಭವದ ಬಳಿಕ ಅಧಿಕಾರಿಗಳು ಜೂ.7ರಂದು 200ಕ್ಕೂ ಹೆಚ್ಚು ಮಂದಿಯನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಿದ್ದರು. ಬಂದೂಕುಧಾರಿಗಳು ಜಿರಿಮುಖ್ ಮತ್ತು ಚೋಟೊಬೇಕ್ರಾ ಪೊಲೀಸ್ ಹೊರಠಾಣೆಗಳನ್ನು ಮತ್ತು ಗೋವಾಖಲ್ ಅರಣ್ಯ ಗಸ್ತು ಕಚೇರಿಯನ್ನು ಮಧ್ಯರಾತ್ರಿ ಬಳಿಕ ಸುಟ್ಟುಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಲಮ್ತಾಯಿ ಖೊನೊವ್, ದಿಬಾಂಗ್ ಖುನೋವ್, ನನ್ಖಲ್ ಮತ್ತು ಬೇಗ್ರಾ ಗ್ರಾಮಗಳಲ್ಲಿ ಜನರನ್ನು ಸ್ಥಳಾಂತರಗೊಳಿಸಲಾಗಿದ್ದ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಮತ್ತೊಂದು ಸಮುದಾಯದವರು ಹಲವು ಫಾರ್ಮ್ ಹೌಸ್ ಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ತಿಳಿದು ಬಂದಿದೆ.