ಮಂಗಳೂರು (ಇಂಡೋನೇಷ್ಯಾ): 16 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಮಹಿಳೆಯನ್ನು ಸಂಪೂರ್ಣವಾಗಿ ನುಂಗಿದ ಆಘಾತಕಾರಿ ಘಟನೆಯೊಂದು ಮಧ್ಯ ಇಂಡೋನೇಷ್ಯಾದ ಮಕಾಸ್ಸರ್ನಲ್ಲಿ ನಡೆದಿದೆ. ನಾಲ್ಕು ಮಕ್ಕಳ ತಾಯಿಯಾದ ಫರೀದಾ(45) ನಾಪತ್ತೆಯಾದ ಮಹಿಳೆ. ಇವರು ನಾಪತ್ತೆಯಾಗಿ ಮೂರು ದಿನ ಕಳೆದಿತ್ತು. ಜೂ.06ರಂದು ರಾತ್ರಿ ಮನೆ ಬಿಟ್ಟು ಹೋದ ಆಕೆ ಪತ್ತೆಯಾಗಿರಲಿಲ್ಲ. ಫರೀದಾ ಕಾಣೆಯಾದಾಗಿನಿಂದ ಆಕೆಯ ಗಂಡ ಹಾಗೂ ಗ್ರಾಮಸ್ಥರು ಹುಟುಕಾಟ ನಡೆಸಿದರೂ ಆಕೆ ಮಾತ್ರ ಪತ್ತೆಯಾಗಲೇ ಇಲ್ಲ. ಮುಂದುವರಿದ ಹುಡುಕಾಟದ ನಡುವೆ ಆಕೆಯದ್ದು ಎನ್ನಲಾದ ಕೆಲವು ವಸ್ತುಗಳು ಗ್ರಾಮದ ಹೊರಗೆ ಕಂಡು ಬಂತು. ಆಕೆಯ ಗಂಡ ಅವುಗಳನ್ನು ಗುರುತಿಸಿದ್ದರಿಂದ ಅದರ ಜಾಡು ಹಿಡಿದು ಹೊರಟ ಗ್ರಾಮಸ್ಥರಿಗೆ ಆಘಾತ ಕಾದಿತ್ತು. ಕಾಳೆಂಪಂಗ್ ಗ್ರಾಮದ ಹೊರವಲಯದಲ್ಲಿ ಸುಮಾರು 16 ಅಡಿಯ ಉದ್ದದ ಹೆಬ್ಬಾವು ಪತ್ತೆಯಾಗಿದ್ದು, ಅದರ ಹೊಟ್ಟೆ ಊದಿಕೊಂಡಿದ್ದು ಕಂಡುಬಂದಿದೆ. ಫರೀದಾಳನ್ನು ಹಾವು ನುಂಗಿದೆ ಎಂದು ಊಹಿಸಿದ ಜನ ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ನೋಡುವ ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲರೂ ಸೇರಿ ಅದರ ಹೊಟ್ಟೆಯನ್ನು ಸೀಳಿದಾಗ ಅದರಲ್ಲಿ ಫರೀದಾಳ ತಲೆ, ಜೊತೆಗೆ ಆಕೆ ತೊಟ್ಟ ಬಟ್ಟೆ ಸಮೇತ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಕಂಡುಬಂದಿದೆ.
ಈ ಪ್ರಕರಣದ ಬಗ್ಗೆ ಮಾತನಾಡಿದ ಜನ ತಮ್ಮ ಊರಿನಲ್ಲಿ ನಾಪತ್ತೆಯಾದವರು ಹೀಗೆ ಹೆಬ್ಬಾವಿನ ಹೊಟ್ಟೆ ಸೇರಿರುವ ಘಟನೆ ಇದು ಮೊದಲಲ್ಲ. ಈ ರೀತಿ ಈ ಹಿಂದೆಯೂ ಆಗಿದೆ. ಸ್ಥಳೀಯ ಆಡಳಿತ ಹೆಬ್ಬಾವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹೆಬ್ಬಾವುಗಳು ಮನುಷ್ಯರನ್ನು ಜೀವಂತವಾಗಿ ನುಂಗುವ ಘಟನೆ ತೀರಾ ಅಪರೂಪವೆನಿಸಿದರೂ ಇಂಡೋನೇಷ್ಯಾದಲ್ಲಿ ಇಂತಹ ಘಟನೆಗಳು ಆಗಾಗ ಕೇಳಿ ಬರುತ್ತಿದೆ.