ಮಂಗಳೂರು: ಉಳ್ಳಾಲದ ಮುಕ್ಕಚ್ಚೇರಿ ಪರಿಸರದಲ್ಲಿ ಶ್ರೀಮಂತ ವ್ಯಕ್ತಿಗಳನ್ನು, ವ್ಯಾಪಾರಿಗಳನ್ನು ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.
ಮುಕ್ಕಚ್ಚೇರಿಯ ಸಮೀರ್ ಅಲಿ ಯಾನೆ ಕಡಪರ ಸಮೀರ್(33), ಬೋಳಿಯಾರ್‌ನ ಮನ್ಸೂರ್ ಯಾನೆ ಬೋಳಿಯಾರು ಮನ್ಸೂರು(30), ಕೋಣಾಜೆ ಮಲಾರ್‌ನ ನೌಷಾದ್(30) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ತಲವಾರು, ಚೂರಿ, ಮೊಬೈಲ್ ಫೋನುಗಳು ಹಾಗೂ ಜೀಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 25.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಸಮೀರ್ ಅಲಿ ವಿರುದ್ಧ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಲೆ ಯತ್ನ, ಜೀವ ಬೆದರಿಕೆ ಪ್ರಕರಣ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಇಲ್ಯಾಸ್ ಕೊಲೆ ಪ್ರಕರಣ, ಫಳ್ನೀರ್‌ನ ಶಾಪ್ ವೊಂದರಲ್ಲಿ ನಡೆದ ಶೂಟ್‌ಔಟ್ ಪ್ರಕರಣ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಪ್ರಕರಣ ಹೀಗೆ ಒಟ್ಟು 7 ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ. ಆರೋಪಿ ಮನ್ಸೂರ್ ವಿರುದ್ಧ ಈ ಹಿಂದೆ ಕೊಣಾಜೆ ಠಾಣೆಯಲ್ಲಿ ದರೋಡೆ, ಹಲ್ಲೆ ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾದ ಫಳ್ನೀರ್‌ನಲ್ಲಿ ನಡೆದ ಶೂಟ್‌ಔಟ್ ಪ್ರಕರಣ, ಹಾಗೂ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಭಾಗಿರುವ ಆರೋಪ ಇದೆ. ಆರೋಪಿ ನೌಷದ್ ಈ ಹಿಂದೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಎಚ್ ಎಂ, ಪಿಎಸ್‌ಐಗಳಾದ ಸುದೀಪ್ ಎಂ ವಿ, ಶರಣಪ್ಪ ಎಸ್ ಭಂಡಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.