ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ಆದೇಶ – ಆದೇಶದಲ್ಲಿ ಏನಿದೆ?

ಮಂಗಳೂರು(ಬೆಂಗಳೂರು): ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹೊಸ ಹಾಗೂ ದಿಟ್ಟ ಹೆಜ್ಜೆ ಇಟ್ಟಿದೆ. ರಾಜ್ಯದ ಖಾಸಗಿ ಆಸ್ಪತ್ರೆಗಳು ತಮ್ಮ ಕ್ಲಿನಿಕ್ ಅಥವಾ ಆಸ್ಪತ್ರೆಯ ಮುಂಭಾಗದಲ್ಲಿ ಸ್ಪಷ್ಟವಾಗಿ ಕಾಣುವಂತೆ ತಮ್ಮ ವೈದ್ಯಪದ್ಧತಿ ಅಲೋಪತಿಯೋ, ಆಯುರ್ವೇದವೋ ಎಂಬುದನ್ನು ಸ್ಪಷ್ಟವಾಗಿ ತಿಳಿಸುವಂತೆ ನೋಂದಣಿ ಫಲಕವನ್ನು ಅಳವಡಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 31ರೊಳಗೆ ಈ ಫಲಕ ಅಳವಡಿಸಲು ಗಡುವು ನೀಡಲಾಗಿದೆ.

ಆರೋಗ್ಯ ಇಲಾಖೆಯ ಈ ಆದೇಶದ ಪ್ರಕಾರ, ವೈದ್ಯರು ಮತ್ತು ಚಿಕಿತ್ಸಾಲಯಗಳು ಸಾರ್ವಜನಿಕರಿಗೆ ಎದ್ದು ಕಾಣುವ ರೀತಿಯಲ್ಲಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಆಸ್ಪತ್ರೆಯ ಹೆಸರು, ಮಾಲೀಕರ ಹೆಸರು ಮತ್ತು ಇತರ ವಿವರಗಳು ನೋಂದಣಿ ಸಂಖ್ಯೆಯ ಜೊತೆಗೆ ನಮೂದಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಒಂದು ವೇಳೆ, ನಿಗದಿತ ಗಡುವಿನೊಳಗೆ ನಾಮಫಲಕ ಅಳವಡಿಸಲು ವಿಫಲರಾದರೆ, ವೈದ್ಯರು ಮತ್ತು ಚಿಕಿತ್ಸಾಲಯದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬಣ್ಣದಲ್ಲಿ ವೈದ್ಯರ ವೈದ್ಯಪದ್ಧತಿ ಹೇಗೆ ಪತ್ತೆ ಹಚ್ಚಬಹುದು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಅಲೋಪತಿ ವೈದ್ಯರಿಗೆ ಆಕಾಶ ನೀಲಿ ಬಣ್ಣದ ನಾಮಫಲಕ, ಆಯುರ್ವೇದ ವೈದ್ಯರಿಗೆ ಹಸಿರು ಬಣ್ಣದ ನಾಮಫಲಕವನ್ನು ಅಳವಡಿಸಬೇಕು. ಈ ಕ್ರಮದಿಂದ ಅರ್ಹತೆ ಇಲ್ಲದ ಹಾಗೂ ನಕಲಿ ವೈದ್ಯರನ್ನು ಪತ್ತೆ ಹಚ್ಚಲು ಸುಲಭ ಸಾಧ್ಯವಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here