ಮಂಗಳೂರು/ಜೈಪುರ: ಅಮೆರಿಕದ ಮಹಿಳೆಯೊಬ್ಬರಿಗೆ ರೂ 300 ಮೌಲ್ಯದ ಕೃತಕ ಆಭರಣಗಳನ್ನು 6 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ಘಟನೆ ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್‌ನಲ್ಲಿ ನಡೆದಿದೆ. ಅಮೆರಿಕದ ಪ್ರಜೆ ಚೆರಿಶ್ ವಂಚನೆ ಒಳಗಾದ ಮಹಿಳೆಯಾಗಿದ್ದಾರೆ.
ರಾಜಸ್ಥಾನದ ಜೈಪುರದ ಜೊಹ್ರಿ ಬಜಾರ್‌ನಲ್ಲಿರುವ ಅಂಗಡಿಯೊಂದರಲ್ಲಿ ಅಮೆರಿಕದ ಪ್ರಜೆ ಚೆರಿಶ್ ಆಭರಣಗಳನ್ನು ಖರೀದಿಸಿ ತಮ್ಮ ದೇಶಕ್ಕೆ ಹಿಂತಿರುಗಿದ್ದರು. ಇದೇ ವರ್ಷ ಏಪ್ರಿಲ್‌ನಲ್ಲಿ ಯುಎಸ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಆಭರಣಗಳನ್ನು ಪ್ರದರ್ಶಿಸಿದಾಗ, ಅದು ನಕಲಿ ಎಂದು ತಿಳಿದುಬಂದಿದೆ. ಚೆರಿಶ್ ಮತ್ತೆ ಭಾರತಕ್ಕೆ ಬಂದು ಅಂಗಡಿ ಮಾಲೀಕ ಗೌರವ್ ಸೋನಿಯನ್ನು ಈ ವಂಚನೆಯ ಕುರಿತು ವಿಚಾರಿಸಿದ್ದಾರೆ. ಆದರೆ ಅಂಗಡಿ ಮಾಲೀಕ ಗೌರವ್ ಸೋನಿ ಚೆರಿಶ್ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನಂತರ, ಚೆರಿಶ್ ಜೈಪುರದಲ್ಲಿ ಪೊಲೀಸರಿಗೆ ದೂರು ದಾಖಲಿಸಿ ಯುಎಸ್ ರಾಯಭಾರ ಕಚೇರಿಯಿಂದ ಸಹಾಯವನ್ನು ಕೋರಿದ್ದಾರೆ. 2022 ರಲ್ಲಿ ಚೆರಿಶ್ ಇನ್‌ಸ್ಟಾಗ್ರಾಮ್ ಮೂಲಕ ಗೌರವ್ ಸೋನಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದೇನೆ ಹಾಗೂ ಎರಡು ವರ್ಷಗಳಲ್ಲಿ ಕೃತಕ ಆಭರಣಗಳಿಗಾಗಿ ರೂ 6 ಕೋಟಿ ಪಾವತಿಸಿದ್ದೇನೆ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.