ಮಂಗಳೂರು/ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ವೇತನ ಪರಿಷ್ಕರಣೆಗೆ ಸಂಬಂಧಿಸಿದ ಏಳನೇ ವೇತನ ಆಯೋಗದ ಶಿಫಾರಸು ಜಾರಿ ಕುರಿತು ಸಿದ್ದರಾಮಯ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನಲಾಗಿದೆ.
ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ಏಳನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜುಲೈ 1 ರಿಂದ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಮುಂದಿನ ಸಂಪುಟ ಸಭೆಯಲ್ಲಿ ಚರ್ಚಿಸುವ ಸ್ಪಷ್ಟ ಸೂಚನೆ ದೊರೆತಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಪರಿಷ್ಕೃತ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ. ವೇತನ ಪರಿಷ್ಕರಣೆ ಕುರಿತು ಅಧ್ಯಯನ ಮಾಡಿ, ವರದಿ ಸಲ್ಲಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 2022ರ ನವೆಂಬರ್‌ನಲ್ಲಿ ವೇತನ ಪರಿಷ್ಕರಣೆ ಆಯೋಗ ರಚಿಸಲಾಗಿತ್ತು.
ಆರು ತಿಂಗಳು ನೀಡಿದ್ದ ಅವಧಿಯನ್ನು ವಿಸ್ತರಿಸಿದ ನಂತರ 2024ರ ಮಾರ್ಚ್‌ನಲ್ಲಿ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಕೆಯಾದ ದಿನದಿಂದಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿತ್ತು. ಹಾಗಾಗಿ, ವೇತನ ಪರಿಷ್ಕರಣೆ ಕುರಿತು ಸರ್ಕಾರಕ್ಕೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ವೇತನ ಆಯೋಗವು ಶೇಕಡಾ 31ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸುವ ಪ್ರಸ್ತಾಪ ಸೇರಿದಂತೆ, ಶೇ. 27.50ರಷ್ಟು ಫಿಟ್‌ಮೆಂಟ್ ನೀಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎನ್ನಲಾಗಿದೆ. 20220ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ವೇತನ ಪರಿಷ್ಕರಣೆ ಸಹಿತ ಹಲವು ಶಿಫಾರಸ್ಸುಗಳನ್ನು ಆಯೋಗ ಮಾಡಿದೆ.