ನ್ಯಾಯವಾದಿಗಳ ರಕ್ಷಣೆಗೆ ಸರಕಾರದ ಹೆಜ್ಜೆ – ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ 2023 ಜಾರಿ

ಮಂಗಳೂರು/ಬೆಂಗಳೂರು: ವಕೀಲರ ಬಹುದಿನಗಳ ಬೇಡಿಕೆ ಈಡೇರಿದ್ದು, ವಕೀಲರ ರಕ್ಷಣೆಗೆ ಸಂಬಂಧಿಸಿದ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ-2023 ಜಾರಿಗೆ ಬಂದಿದೆ. ಈ ಸಂಬಂಧ ರಾಜ್ಯ ಸರಕಾರ ಜೂನ್‌ 10ರಂದು ಗೆಜೆಟ್‌ ಅಧಿಸೂಚನೆ ಪ್ರಕಟಿಸಿದೆ. ಅದರಂತೆ, ಇನ್ನು ಮುಂದೆ ವಕೀಲರು ತಮ್ಮ ವೃತ್ತಿಪರ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಾಗ ಅವರ ಮೇಲೆ ಹಲ್ಲೆ ನಡೆಸುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಬೆದರಿಕೆ ಹಾಕುವುದು ಅಥವಾ ಕಿರುಕುಳ ನೀಡುವುದು ನಿಷೇಧಿಸಲಾಗಿದ್ದು, ಒಂದೊಮ್ಮೆ ಇಂತಹ ಕೃತ್ಯಗಳು ನಡೆದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಲಿದೆ.

ಯಾವುದೇ ವ್ಯಕ್ತಿಯು ನ್ಯಾಯವಾದಿಯ ಮೇಲೆ ಹಿಂಸಾಚಾರ ಕೃತ್ಯ ಎಸಗತಕ್ಕದಲ್ಲ. ಒಂದು ವೇಳೆ ಹಲ್ಲೆ, ಹಿಂಸಾಚಾರ ನಡೆಸಿದರೆ ಅಂತಹ ವ್ಯಕ್ತಿ 6 ತಿಂಗಳಿನಿಂದ 3 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿ ವರೆಗಿನ ದಂಡ ವಿಸ್ತರಿಸಬಹುದಾದ ಜುಲ್ಮಾನೆ ಭರಿಸಬೇಕಾಗುತ್ತದೆ. ಜೈಲುವಾಸ ಮತ್ತು ದಂಡ ಎರಡರಿಂದಲೂ ಶಿಕ್ಷಿತನಾಗಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. 2021ರಲ್ಲಿ ಕರಡು ವಿಧೇಯಕ ರೂಪಿಸಿ ಅಂದಿನ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್‌ ನೇತೃತ್ವದಲ್ಲಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಮಸೂದೆ ಸಿದ್ದಪಡಿಸಿ 2023ರ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಈ ವರ್ಷ ಫೆಬ್ರವರಿಯಲ್ಲಿ ನಡೆದ ಬಜೆಟ್‌ ಅಧಿವೇಶನದಲ್ಲಿ ಮಸೂದೆಗೆ ಅನುಮೋದನೆ ದೊರಕಿತ್ತು. ಮಾರ್ಚ್‌ 20ರಂದು ರಾಜ್ಯಪಾಲರು ಒಪ್ಪಿಗೆ ನೀಡಿದ್ದರು. ಜೂ. 10ರಂದು ಕಾಯ್ದೆ ಜಾರಿಗೊಳಿಸಿ ಗೆಜೆಟ್‌ ಅಧಿಸೂಚನೆ ಪ್ರಕಟಿಸಲಾಗಿದೆ.

LEAVE A REPLY

Please enter your comment!
Please enter your name here