ಮಂಗಳೂರು/ಅಬುಧಾಬಿ: ಕುವೈತ್ ಮಂಗಾಫ್‌ನಲ್ಲಿ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ 45 ಭಾರತೀಯರ ಪಾರ್ಥಿವ ಶರೀರವನ್ನು ಹೊತ್ತ ಭಾರತೀಯ ವಾಯುಪಡೆ ವಿಮಾನ ಶುಕ್ರವಾರ(ಜೂ.14) ಬೆಳಿಗ್ಗೆ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.
ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ(ಜೂ.14) ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿತು. ನಿನ್ನೆ ಗುರುವಾರ(ಜೂ.13) ಕುವೈತ್‌ಗೆ ಆಗಮಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಅವರು ಕುವೈತ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮೃತದೇಹಗಳನ್ನು ತವರೂರಿಗೆ ಕರೆತರಲು ಕ್ರಮ ಕೈಗೊಂಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಭಾರತೀಯ ವಾಯುಪಡೆಯ ವಿಶೇಷ ವಿಮಾನ ಸಿ-130ಜೆ ಶುಕ್ರವಾರ ಮುಂಜಾನೆ ಕೊಚ್ಚಿಗೆ ಪ್ರಯಾಣ ಬೆಳೆಸಿದೆ ಎಂದು ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. 45 ಮಂದಿ ಮೃತರಲ್ಲಿ 31 ಮೃತದೇಹಗಳನ್ನು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ನಂತರ ವಿಮಾನವು ಉಳಿದ ಮೃತದೇಹಗಳನ್ನು ಹೊತ್ತು ದೆಹಲಿಗೆ ತೆರಳಲಿದೆ ಎಂದು ತಿಳಿದುಬಂದಿದೆ. ಕೇರಳ ಸೇರಿದಂತೆ ತಮಿಳುನಾಡಿನ 7 ಮಂದಿ ಮತ್ತು ಕರ್ನಾಟಕದ ಒಬ್ಬರ ಮೃತದೇಹಗಳನ್ನು ಕೊಚ್ಚಿಗೆ ತರಲಾಗಿದೆ. ದಕ್ಷಿಣ ಭಾರತೀಯರಲ್ಲದೆ, ಉತ್ತರ ಪ್ರದೇಶದ ಮೂವರು, ಒಡಿಶಾದ ಇಬ್ಬರು ಮತ್ತು ಬಿಹಾರ, ಪಂಜಾಬ್, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಹರಿಯಾಣದಿಂದ ತಲಾ ಒಬ್ಬರು ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದು, ಅವರ ಮೃತದೇಹಗಳನ್ನು ದೆಹಲಿ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲಾಗುತ್ತಿದೆ.