ಚಿಕ್ಕಮೇಳಗಳಿಗೆ ನಿಯಮ ರೂಪಿಸಿದ ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ

ಮಂಗಳೂರು: ಯಕ್ಷಗಾನ ಮೇಳಗಳ ಆಟಗಳು ಇಲ್ಲದ ಮಳೆಗಾದಲ್ಲಿ ಜೀವನೋಪಾಯಕ್ಕಾಗಿ ಮನೆಮನೆಗೆ ತೆರಳಿ ಪ್ರದರ್ಶನ ನೀಡುವ ‘ಚಿಕ್ಕಮೇಳ’ಗಳು ಶಿಸ್ತು ಪಾಲಿಸುವಂತೆ ಮಾಡಲು ತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ ರಚಿಸಲಾಗಿದೆ.

‘ಚಿಕ್ಕಮೇಳ’ ಅಥವಾ ‘ರಾಧಾಕೃಷ್ಣ’ ಎಂಬ ಹೆಸರಿನಲ್ಲಿ ಮನೆಗಳ ಚಾವಡಿಗಳಲ್ಲಿ ಪ್ರದರ್ಶನ ನೀಡುವ ತಂಡಗಳು ಈಚೆಗೆ ಮಿತಿಮೀರಿ ವರ್ತಿಸುವುದು ಕಂಡುಬಂದಿದೆ. ಇದರಿಂದ ಕಲೆಗೆ ಅವಮಾನ ಮತ್ತು ಕಲಾವಿದರಿಗೆ ಮುಜುಗರ ಉಂಟಾಗುತ್ತಿದೆ. ಇನ್ನು ಮುಂದೆ ಇಂಥ ಪ್ರದರ್ಶನ ನೀಡಬೇಕಾದರೆ ಅನುಮತಿ ಕಡ್ಡಾಯ’ ಎಂದು ಒಕ್ಕೂಟದ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಕ್ಕೂಟದಲ್ಲಿ ನೋಂದಾಯಿಸಿಕೊಂಡ ತಂಡಗಳು ಮಾತ್ರ ಮನೆಮನೆಗೆ ಭೇಟಿ ನೀಡಬಹುದಾಗಿದ್ದು ಕಲಾವಿದರಲ್ಲಿ ವೃತ್ತಿಮೇಳದ ಯಜಮಾನರ ಶಿಫಾರಸು ಪತ್ರ ಇರಬೇಕು, ಆಯಾ ಗ್ರಾಮ ಲೆಕ್ಕಾಧಿಕಾರಿ, ಗ್ರಾಮದ ದೇವಸ್ಥಾನದ ಆಡಳಿತಾಧಿಕಾರಿ ಅಥವಾ ವ್ಯವಸ್ಥಾಪನಾ ಸಮಿತಿ, ಪೊಲೀಸ್‌ ಠಾಣೆಯ ಅನುಮತಿ ಪತ್ರ ಇರಬೇಕು’ ಎಂದರು.

ಹತ್ತನಾವಧಿ (ಮೇ 24)ಯಿಂದ ದೀಪಾವಳಿ ವರೆಗೆ ಮಾತ್ರ ತಿರುಗಾಟ ನಡೆಸಬಹುದಾಗಿದ್ದು ಸಂಜೆ 5.30ರಿಂದ ರಾತ್ರಿ 10.30ರ ಅವಧಿಯಲ್ಲಿ ಮಾತ್ರ ಮನೆಮನೆ ಭೇಟಿ ಮಾಡಬಹುದಾಗಿದೆ. ಶಿಸ್ತು ಪಾಲನೆಗೆ ಆದ್ಯತೆ ನೀಡಬೇಕು, ಗಣಪತಿ ಸ್ವಸ್ತಿಕ ಕಡ್ಡಾಯ ಮಾಡಬಾರದು, ಮನೆಯಿಂದ ಮನೆಗೆ ಹೋಗುವಾಗ ನಿಶ್ಯಬ್ದವಾಗಿರಬೇಕು, ಚೌಕಿಯಿಂದ ಹೊರಟ ನಂತರ ಧೂಮಪಾನ, ಮದ್ಯಪಾನ, ಗುಟ್ಕಾ ಮತ್ತಿತರ ಪದಾರ್ಥ ಸೇವನೆಗೆ ಅವಕಾಶವಿಲ್ಲ’ ಎಂದು ತಿಳಿಸಿದ ಅವರು ಹಿಮ್ಮೇಳ, ಮುಮ್ಮೇಳದವರಿಗೂ ಅನೇಕ ನಿರ್ಬಂಧಗಳನ್ನು ಹಾಕಲಾಗಿದೆ ಎಂದರು.ಯಕ್ಷಗಾನದ ವೇಷತೊಟ್ಟು ಭಿಕ್ಷಾಟನೆ ಮಾಡುವುದು ಕಂಡುಬಂದರೆ ಅಂಥವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಸರಪಾಡಿ ಅಶೋಕ ರೈ ಮನವಿ ಮಾಡಿದರು.ಯಕ್ಷಗಾನ ವೇದಿಕೆ ಪ್ರದರ್ಶನ ಬಿಟ್ಟು ಬೀದಿಬದಿಯಲ್ಲಿ ಪ್ರದರ್ಶನಕ್ಕೆ ಇರುವ ಕಲೆಯಲ್ಲ. ಆದರೆ ನವರಾತ್ರಿ ಗಣೇಶೋತ್ಸವ ಅಷ್ಟಮಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ವೇಷತೊಟ್ಟುಕೊಂಡು ಭಿಕ್ಷೆ ಬೇಡುವುದು ಕಂಡುಬರುತ್ತಿದೆ. ಇದರಿಂದ ನೈಜ ಕಲಾವಿದರು ನೊಂದುಕೊಂಡಿದ್ದಾರೆ. ಆದ್ದರಿಂದ ಇಂಥ ಭಿಕ್ಷಾಟನೆ ಮಾಡುವವರ ಮೇಲೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಸಾರ್ವಜನಿಕರೂ ಎಚ್ಚೆತ್ತುಕೊಳ್ಳಬೇಕು ಭಿಕ್ಷಾಟನೆಗಾಗಿ ವೇಷ ಹಾಕುವವರಿಗೆ ಬಾಡಿಗೆಗೆ ವಸ್ತ್ರ ಮತ್ತು ಪರಿಕರಗಳನ್ನು ಕೊಡಬಾರದು ಎಂದು ಅವರು ಕೋರಿದರು.

43 ಚಿಕ್ಕಮೇಳಗಳು ತಮ್ಮಲ್ಲಿ ನೋಂದಣಿ ಮಾಡಿಸಿವೆ ಎಂದ ಅವರು, ನೋಂದಣಿ ಶುಲ್ಕ ಹಾಗೂ ಒಕ್ಕೂಟದ ಮಾನ್ಯತೆ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.ಒಕ್ಕೂಟದ ಉಪಾಧ್ಯಕ್ಷ ರಮೇಶ ಕುಲಶೇಖರ, ಪ್ರಧಾನ ಕಾರ್ಯದರ್ಶಿ ಕುಮಾರ್ ಪಾಲೆಮಾರ್, ಕಾರ್ಯದರ್ಶಿ ದಿವಾಕರ ದಾಸ್ ಮತ್ತು ಜೊತೆ ಕಾರ್ಯದರ್ಶಿ ದಿನೇಶ್ ರೈ ಕಡಬ ಇದ್ದರು.

LEAVE A REPLY

Please enter your comment!
Please enter your name here