ಮಂಗಳೂರು ವಿಶ್ವವಿದ್ಯಾನಿಲಯ ಶೈಕ್ಷಣಿಕ ಮಂಡಳಿ ಸಭೆ- ಸಂಯೋಜನೆ ನವೀಕರಣಕ್ಕೆ ಅರ್ಜಿ ಸಲ್ಲಿಸದ 17 ಕಾಲೇಜು – ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತತೆ, ಶೈಕ್ಷಣಿಕ ಮಂಡಳಿ ನಿರ್ಧಾರ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ 17 ಪದವಿ ಕಾಲೇಜುಗಳು 2024–25ನೇ ಸಾಲಿನ ಸಂಯೋಜನೆ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ಕುಲಪತಿ ಪ್ರೊ. ಪಿ.ಎಲ್.ಧರ್ಮ ತಿಳಿಸಿದ್ದಾರೆ. ಜೂ.19ರಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಈ 17 ಕಾಲೇಜುಗಳು ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಪದವಿ ನಡೆಸಲು ಸಂಯೋಜನೆ ನವೀಕರಣ, ವಿಸ್ತರಣೆಗೆ ಅರ್ಜಿ ಸಲ್ಲಿಸಿಲ್ಲ. ಆದರೆ ಈ ಕಾಲೇಜುಗಳು ತಮ್ಮ ಎರಡನೇ ವರ್ಷ ಮತ್ತು ಮೂರನೇ ವರ್ಷದ ಪದವಿ ಕಾರ್ಯಕ್ರಮಗಳನ್ನು ನಡೆಸಬಹುದು ಎಂದರು.

ಕಡಬದ ಏಮ್ಸ್ ಪ್ರಥಮ ದರ್ಜೆ ಕಾಲೇಜು, ಕುಂಟಿಕಾನದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್, ಸೇಂಟ್ ಅಲೋಶಿಯಸ್ ಸಂಜೆ ಕಾಲೇಜು, ಮಹಾಲಸಾ ಸ್ಕೂಲ್ ಆಫ್ ಆರ್ಟ್, ಸುಳ್ಯದ ಶ್ರೀ ಶಾರದಾ ಮಹಿಳಾ ಪ್ರಥಮ ದರ್ಜೆ ಕಾಲೇಜು, ಮಾಬುಕಳದ ಬಿ.ಡಿ. ಶೆಟ್ಟಿ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್, ಕರಾವಳಿ ಕಾಲೇಜ್ ಆಫ್ ಎಜುಕೇಶನ್, ಪ್ರೇಮಕಾಂತಿ ಕಾಲೇಜ್ ಆಫ್ ಎಜುಕೇಶನ್, ಸರ್ಸಾ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್‌ ಸೈನ್ಸ್, ಆಂಟೋನಿ ಕಾಲೇಜ್ ಆಫ್ ಕಾಮರ್ಸ್, ರಾಮಕುಂಜೇಶ್ವರ ಕಾಲೇಜು, ಮೆರೆಡಿಯನ್ ಕಾಲೇಜು, ಅಂಬಿಕಾ ಮಹಾವಿದ್ಯಾಲಯ ಕಾಲೇಜು, ಪನಾ ಇನ್‌ಸ್ಟಿಟ್ಯೂಟ್ ಆಫ್ ಯುಜಿ ಸ್ಟಡೀಸ್, ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಮತ್ತು ಕುಂದಾಪುರದ ರಿಚರ್ಡ್ ಅಲ್ಮೇಡಾ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿಗಳ ಕೊರತೆಯಿಂದ ಸಂಯೋಜನೆ ನವೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ ಎಂದು ವಿವರಿಸಿದರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತತೆ ನೀಡಲು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಪ್ರಸ್ತಾಪವನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಪ್ರೊ. ಧರ್ಮ ತಿಳಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಅಡಿಯಲ್ಲಿ 178 ಸಂಯೋಜಿತ ಕಾಲೇಜುಗಳು ಇವೆ. ಇವುಗಳಲ್ಲಿ 132 ಕಾಲೇಜುಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದು, ಐದು ಘಟಕ ಕಾಲೇಜುಗಳು, ಏಳು ಸ್ವಾಯತ್ತ ಕಾಲೇಜುಗಳು, 21 ಸರ್ಕಾರಿ ಕಾಲೇಜುಗಳು, 16 ಖಾಸಗಿ ಅನುದಾನಿತ ಕಾಲೇಜುಗಳು ಮತ್ತು 71 ಖಾಸಗಿ ಅನುದಾನರಹಿತ ಕಾಲೇಜುಗಳು ಮತ್ತು 71 ಖಾಸಗಿ ಅನುದಾನರಹಿತ ಕಾಲೇಜುಗಳಾಗಿವೆ. ಉಡುಪಿ ಜಿಲ್ಲೆಯಲ್ಲಿ 46 ಕಾಲೇಜುಗಳು ಇದ್ದು, 12 ಸರ್ಕಾರಿ ಕಾಲೇಜುಗಳು, 11 ಖಾಸಗಿ ಅನುದಾನಿತ ಕಾಲೇಜುಗಳು ಮತ್ತು 21 ಖಾಸಗಿ ಅನುದಾನರಹಿತ ಕಾಲೇಜುಗಳಾಗಿವೆ. ವಿಶ್ವವಿದ್ಯಾನಿಲಯದ ಸ್ಥಳೀಯ ತಪಾಸಣಾ ಸಮಿತಿ (ಎಲ್‌ಐಸಿ) ಕಾಲೇಜುಗಳಿಗೆ ಭೇಟಿ ನೀಡಿ ಅದರ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ ನಂತರ 136 ಕಾಲೇಜುಗಳಿಗೆ ಸಂಯೋಜನೆಯನ್ನು ಮುಂದುವರಿಸಲು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.

ಹೊಸ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸಿದ 31 ಕಾಲೇಜುಗಳಲ್ಲಿ 16 ಬಿಸಿಎ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಿವೆ. ನಂತೂರಿನ ಭಾರತಿ ಕಾಲೇಜು ಹೊಸ ಕೋರ್ಸ್‌ ಸೇರ್ಪಡೆಗೆ ಸಲ್ಲಿಸಿದ್ದ ಅರ್ಜಿಯನ್ನು ಎಲ್ಐಸಿ ಶಿಫಾರಸು ಮಾಡಿದ್ದು, ಅದನ್ನು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ. ಕುಲಸಚಿವ ಕೆ. ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಎಚ್. ದೇವೇಂದ್ರಪ್ಪ, ಹಣಕಾಸು ಅಧಿಕಾರಿ ಸಂಗಪ್ಪ ವೈ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here