ಮಂಗಳೂರು/ಮಡಿಕೇರಿ: ಕೋಟೆಬೆಟ್ಟ ಪ್ರವಾಸಕ್ಕೆಂದು ಆಗಮಿಸಿದ ಪ್ರವಾಸಿಗರ ಮೇಲೆ ಬೈಕಿನಲ್ಲಿ ಬಂದ ಇಬ್ಬರು ಹಲ್ಲೆ ಮಾಡಿ ದೌರ್ಜನ್ಯ ಎಸಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಕ್ಕಳು, ಮಹಿಳೆಯರು ಸೇರಿದಂತೆ ಪುತ್ತೂರಿನಿಂದ ಕುಟುಂಬವೊಂದು ಕೋಟೆಬೆಟ್ಟ ಪ್ರವಾಸಿ ತಾಣಕ್ಕೆ ಆಗಮಿಸಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಇಬ್ಬರು ಪುಂಡ ಯುವಕರು ಹಲ್ಲೆ ನಡೆಸಿದ್ದಾರೆ. ಅದಾದ ಬಳಿಕ ಚಿನ್ನದ ಸರ ಎಗರಿಸಿ ಬೈಕನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳಿಬ್ಬರು ಮಾದಾಪುರ ಸಮೀಪದ ನಿವಾಸಿಗಳೆಂಬ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ಪ್ರವಾಸಿಗರ ಮೇಲೆ ಹೆಲ್ಮೆಟ್ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ದೌರ್ಜನ್ಯಕ್ಕೆ ಒಳಗಾದವರು ಮಾದಾಪುರ ಉಪ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಪುತ್ತೂರಿನವರು ಎನ್ನಲಾದ ಕೆಲ ಪ್ರವಾಸಿಗರು ಕಡಿದಾಗಿರುವ ಮಾದಾಪುರ ಗರ್ವಾಲೆ ರಸ್ತೆಯಲ್ಲಿ ಅತೀ ವೇಗದಲ್ಲಿ ವಾಹನ ಚಲಾಯಿಸಿ, ಎದುರಿಗೆ ಬಂದ ಸ್ಥಳೀಯ ಯುವಕರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸುವ ಸಂಭವ ಎದುರಾದಾಗ, ಬೈಕಿನಲ್ಲಿದ್ದ ಯುವಕರು ರಸ್ತೆಯ ಪಕ್ಕಕ್ಕೆ ಬಿದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದ್ದು ಎದುರಿನ ವಾಹನದಲ್ಲಿರುವರು ಬಿದ್ದರೂ ಕೂಡ ನೋಡದೆ, ಅದೇ ವೇಗದಲ್ಲಿ ಪ್ರವಾಸಿಗರು ಪರಾರಿಗೆ ಯತ್ನಿಸಿದ್ದಾರೆ. ಬೈಕ್ ಸವಾರ ಯುವಕರು, ಇನ್ನೋವಾ ಕಾರನ್ನು ಹಿಂಬಾಲಿಸಿ ಛೇಸ್ ಮಾಡಿದ್ದು, ಅಪಘಾತ ಯತ್ನ ಮತ್ತು ಅತಿ ವೇಗದ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ, ಹಲ್ಲೆ ನಡೆದಿದೆ. ನಂತರ ಸ್ಥಳೀಯ ಯುವಕರಿಬ್ಬರ ವಿರುದ್ದ ಪ್ರವಾಸಿಗರು ಸುಳ್ಳು ದೂರು ನೀಡಿದ್ದು ತಾವು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಸಂಬಂಧಿಕರು ಎಂದು ಬಿಂಬಿಸಿಕೊಂಡು, ಪೋಲೀಸರ ಮೇಲೆ ಒತ್ತಡ ಹಾಕಿ, ಅಮಾಯಕ ಸ್ಥಳೀಯರ ವಿರುದ್ದ ಸರಗಳ್ಳತನದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇಂತಹ ಘಟನೆಗಳು ಕೊಡಗಿನಲ್ಲಿ ಸಾಮಾನ್ಯವಾಗಿದ್ದು, ಮೋಜು ಮಸ್ತಿಗೆ ಹೊರಗಿನಿಂದ ಬರುವ ಪ್ರವಾಸಿಗರು, ಕೊಡಗಿಗೆ ಅಪಾಯಕಾರಿಯಾಗಿದ್ದು, ಪೋಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟವರು ಸೂಕ್ತ ತನಿಖೆ ನಡೆಸಿ ಅಮಾಯಕ ಸ್ಥಳೀಯರಿಗೆ ರಕ್ಷಣೆ ನೀಡಬೇಕು ಮತ್ತು, ಯಾವುದೇ ಒತ್ತಡಕ್ಕೆ ಮಣಿಯದೆ, ಕೊಡಗಿಗೆ ಮಾರಕವಾಗಿರುವ ಕೆಲವು ಪ್ರವಾಸಿಗರ ಅತಿರೇಕಕ್ಕೆ ತಡೆ ಒಡ್ಡಬೇಕು. ಸ್ಥಳೀಯರ ಬದುಕಿಗೆ, ಮತ್ತು ಕೊಡಗಿನ ಪರಿಸರಕ್ಕೆ ಮಾರಕವಾದ ಇಂತ ಘಟನೆಗಳು ಮರುಕಳಿಸಿದರೆ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಅಹಿತಕರ ಘಟನೆಗಳು ಮತ್ತು ಪ್ರವಾಸಿಗರಿಗೆ ತಡೆಯೊಡ್ಡುವಂತ ಕಾರ್ಯಗಳು ನಡೆಯಲಿವೆ ಎಂದು ಕೊಡಗಿನ ಮೂಲನಿವಾಸಿಗಳು ಎಚ್ಚರಿಸಿದ್ದಾರೆ.
ಕೊಡಗಿನ ಬೆಡಗನ್ನು ಸವಿಯಲು ಬರುವ ಹೊರಗಿನ ಕೆಲ ಪ್ರವಾಸಿಗರು ಎಲ್ಲೆಮೀರುತಿದ್ದು, ಸ್ಥಳಿಯರ ಮೇಲೆ ದಬ್ಬಾಳಿಕೆ ನಡೆಸುವುದು, ಸುಳ್ಳು ಮೊಕದ್ದಮೆ ದಾಖಲಿಸುವುದು ಸಾಮಾನ್ಯವಾಗಿದೆ. ಇಂತಹುದೇ ಘಟನೆ ಮಾದಾಪುರ ಸಮೀಪದ ಕೋಟೆಬೆಟ್ಟ ತಪ್ಪಲಿನಲ್ಲಿ ನಡೆದಿದೆ ಎನ್ನಲಾಗಿದೆ.
ಈ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನದ ಸರ ಕಿತ್ತುಕೊಂಡಿರುವುದಾಗಿ ಬಿಂಬಿಸಲಾಗುತ್ತಿದೆ. ಕ್ಷುಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಗಲಾಟೆ ಸಂದರ್ಭ ಯುವತಿಯ ಚಿನ್ನದ ಸರ ಬಿದ್ದು ಹೋಗಿರುವುದೇ ವಿನಃ ಅದನ್ನು ಕಿತ್ತುಕೊಂಡಿಲ್ಲ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ