ಮಂಗಳೂರು/ಕಣ್ಣೂರು: ಕಣ್ಣೂರಿನ 13 ವರ್ಷದ ಬಾಲಕಿಯೊಬ್ಬಳು ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದಾಳೆ. ಕಣ್ಣೂರಿನ ತೊಟ್ಟಡದ ರಾಗೇಶ್ ಬಾಬು ಮತ್ತು ಧನ್ಯ ದಂಪತಿಯ ಪುತ್ರಿ ದಕ್ಷಿಣಾ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿಗೆ ಒಳಗಾಗಿದ್ದು ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ.
ದಕ್ಷಿಣಾ ತಲೆನೋವು ಮತ್ತು ವಾಂತಿ ಹಿನ್ನೆಲೆಯಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಳು. ಆಕೆಯ ಸ್ಥಿತಿ ಹದಗೆಟ್ಟ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷಾ ಫಲಿತಾಂಶಗಳಿಂದ ಆಕೆ ಅಪರೂಪದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನಿಂದ ಬಳಲುತ್ತಿದ್ದಾಳೆ ಎಂಬುದು ದೃಢಪಟ್ಟಿತ್ತು. ಇದು ಸಾಮಾನ್ಯವಾಗಿ ನೀರಿನ ಮೂಲಗಳ ಮೂಲಕ ದೇಹವನ್ನು ಪ್ರವೇಶಿಸುವ ರೋಗಕಾರಕ ಅಮೀಬಾದಿಂದ ಬಂದಿದೆ ಎನ್ನುವುದು ದೃಢಪಟ್ಟಿತ್ತು.
ದಕ್ಷಿಣಾ ಶಾಲಾ ಪ್ರವಾಸದ ಸಮಯದಲ್ಲಿ ಮುನ್ನಾರ್‌ಗೆ ಹೋದಾಗ ಈಜು ಕೊಳದಲ್ಲಿ ಸ್ನಾನ ಮಾಡಿದ್ದು ಆ ವೇಳೆ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ನೇಗ್ಲೇರಿಯಾ ಫೌಲೆರಿ ಎಂದೂ ಕರೆಯಲ್ಪಡುವ ಇದು ಅಮೀಬಾ ಆಗಿದ್ದು, ಇದು ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳಂತಹ ಬೆಚ್ಚಗಿನ ಮತ್ತು ಆಳವಿಲ್ಲದ ಶುದ್ಧ ನೀರಿನಲ್ಲಿ ಪ್ರಪಂಚದಾದ್ಯಂತ ವಾಸಿಸುತ್ತದೆ. ಇದು ಮಣ್ಣಿನಲ್ಲಿಯೂ ವಾಸಿಸುತ್ತದೆ. ಚಿಕಿತ್ಸೆ ನೀಡಿದರೂ ಸಾವಿನ ಪ್ರಮಾಣವು ಶೇ.97ಕ್ಕಿಂತ ಹೆಚ್ಚು ಎಂಬುವುದು ತಜ್ಞರ ಅಭಿಪ್ರಾಯ.
ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ಸೋಂಕಿನ ಲಕ್ಷಣ ಮತ್ತು ಮುನ್ನೆಚ್ಚರಿಕೆ:
ತೀವ್ರ ಜ್ವರ, ತಲೆನೋವು, ವಾಕರಿಕೆ ಮತ್ತು ವಾಂತಿ, ನಡುಗುವಿಕೆ, ಮೆನಿಂಜೈಟಿಸ್‌ನಂತಹ ರೋಗಲಕ್ಷಣಗಳು, ಗಟ್ಟಿಯಾದ ಕುತ್ತಿಗೆ ಮತ್ತು ಬೆಳಕಿಗೆ ತೀವ್ರವಾದ ಸಂವೇದನೆ, ಮಾನಸಿಕ ಗೊಂದಲ,
ಬೆಚ್ಚಗಿನ ಸಿಹಿನೀರಿನ ಸ್ಥಳಗಳಲ್ಲಿ, ವಿಶೇಷವಾಗಿ ನಿಶ್ಚಲವಾದ ನೀರಿನಲ್ಲಿ, ಮೂಗಿನ ಪ್ಲಗ್‌ಗಳಿಲ್ಲದೆ ಈಜಬೇಡಿ ಅಥವಾ ಜಲಕ್ರೀಡೆಗಳನ್ನು ಮಾಡಬೇಡಿ. ನೇಗ್ಲೇರಿಯಾ ಫೌಲೆರಿ ಇದೆ ಎಂದು ತಿಳಿದಿದ್ದರೆ ಅಥವಾ ಇರುವ ಸಾಧ್ಯತೆಯಿದ್ದರೆ ನೀರಿಗಿಳಿಯಬೇಡಿ. ನಿಮ್ಮ ಮೂಗಿನ ಮಾರ್ಗವನ್ನು ಸ್ವಚ್ಛಗೊಳಿಸುವ ಯಾವುದೇ ಸಾಧನಕ್ಕಾಗಿ ಟ್ಯಾಪ್ ನೀರನ್ನು ಬಳಸಬೇಡಿ. ಬಟ್ಟಿ ಇಳಿಸಿದ ಅಥವಾ ಕ್ರಿಮಿನಾಶಕ ನೀರನ್ನು ಮಾತ್ರ ಬಳಸಿ. ನೀರಿನಿಂದ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಫಿಲ್ಟರ್‌ಗಳನ್ನು ಬಳಸಿ.