ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯ ರಕ್ಷಣೆ – ರಕ್ಷಣೆಗೆ ಕಾರಣವಾದ ಸೂಕ್ಷ್ಮ ಸಂವೇದನೆಯರಿತ ಶ್ವಾನದ ಹಿಂಟ್

ಮಂಗಳೂರು/ಉಪ್ಪಿನಂಗಡಿ: ಗಂಡನೊಂದಿಗೆ ಜಗಳವಾಡಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಲೆತ್ನಿಸಿದ ಮಹಿಳೆಯೋರ್ವರನ್ನು ಯುವಕನೋರ್ವ ರಕ್ಷಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.‌

ಬೆಳ್ತಂಗಡಿ ತಾಲೂಕಿನ ಬನ್ನೆಂಗಳ ಸಮೀಪದ ನಿವಾಸಿಯೋರ್ವರು ಗುರುವಾರ ರಾತ್ರಿ ಸುಮಾರು 9.30ರಿಂದ 10ರ ನಡುವೆ ಉಪ್ಪಿನಂಗಡಿಯ ನೇತ್ರಾವತಿ ನದಿ ಸೇತುವೆಯ ಮೇಲೆ ಸಂಶಯ ಬರುವಂತೆ ಆ ಕಡೆ, ಈ ಕಡೆ ನಡೆದಾಡುವುದು ಕಾಣಿಸಿಕೊಂಡಿದ್ದು, ಇದನ್ನು ಕಂಡ ರಿಕ್ಷಾ ಚಾಲಕರೋರ್ವರು ಅಲ್ಲಿಯೇ ಸಮೀಪದ ನಿವಾಸಿ ಸಾಮಾಜಿಕ ಕಾರ್ಯಕರ್ತ ಫಯಾಝ್ ಯು.ಟಿ. ಅವರ ಗಮನಕ್ಕೆ ತಂದಿದ್ದರು. ತಕ್ಷಣವೇ ಕಾರ್ಯಪ್ರವೃತರಾದ ಫಯಾಜ್ ಯು.ಟಿ. ಅವರು ಸೇತುವೆಯ ಮೇಲೆ ತೆರಳಿದ್ದು, ಅಷ್ಟರಲ್ಲೇ ಆ ಮಹಿಳೆಯು ಸೇತುವೆಯ ತಡೆ ಗೋಡೆ (ದಂಡೆ)ಯ ಮೇಲೆ ಹತ್ತಿ ನದಿಗೆ ಹಾರಲು ಸಿದ್ಧರಾಗಿದ್ದರು. ತಕ್ಷಣವೇ ಅಲ್ಲಿಗೆ ಧಾವಿಸಿದ ಫಯಾಜ್ ಅವರು ಕ್ಷಿಪ್ರಗತಿಯಲ್ಲಿ ಆ ಮಹಿಳೆಯ ಕೈ ಹಿಡಿದು ಈ ಕಡೆ ಎಳೆದಿದ್ದು, ಮಹಿಳೆಯು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆದಿದ್ದಾರೆ. ಬಳಿಕ ಮಹಿಳೆಯನ್ನು ಸಮೀಪದ ಮನೆಯೊಂದಕ್ಕೆ ಕರೆದೊಯ್ದು ಸಂತೈಸಿ ಸ್ಥಳೀಯರ ನೆರವಿನಿಂದ ಮಹಿಳೆಯನ್ನು ಪೊಲೀಸರಿಗೊಪ್ಪಿಸಿದ್ದಾರೆ.

17 ಮತ್ತು 18ರ ಹರೆಯದ ಇಬ್ಬರು ಮಕ್ಕಳಿರುವ ಈ ಹಿಂದೂ ಮಹಿಳೆಯು ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, 16 ವರ್ಷಗಳ ಹಿಂದೆ ಇಲ್ಲಿನ ಯುವಕನೋರ್ವನನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಒಂದು ವರ್ಷದ ಹಿಂದೆ ಇವರ ಪತಿ ಕುಡಿದು ಬಂದು ಈ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ನಿನ್ನೆ ರಾತ್ರಿ ತನ್ನ ಮನೆಯಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿರುವ ನೇತ್ರಾವತಿ ನದಿಯ ಸೇತುವೆಯ ಬಳಿ ನಡೆದುಕೊಂಡೇ ಬಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕಳೆದೆರಡು ದಿನಗಳಿಂದ ನಿರಂತರ ಮಳೆಯ ಕಾರಣದಿಂದ ನಿನ್ನೆ ನೇತ್ರಾವತಿ ನದಿಯಲ್ಲಿ ತುಂಬಾ ನೀರು ಕೂಡಾ ಇದ್ದು, ರಭಸದಿಂದ ಹರಿಯುತ್ತಿತ್ತು. ತನ್ನ ತಂಡದೊಂದಿಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಈಗಾಗಲೇ ನಡೆಸಿರುವ ಯು.ಟಿ. ಫಯಾಝ್ ಅವರ ಈ ನಡೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

ಹಿಂಬಾಲಿಸಿಕೊಂಡು ಬಂದ ಶ್ವಾನ:

ಗಂಡನೊಂದಿಗೆ ಜಗಳವಾಡಿ ಆತ್ಮಹತ್ಯೆಯ ನಿರ್ಧಾರದೊಂದಿಗೆ ಸುಮಾರು ನಾಲ್ಕು ಕಿ.ಮೀ. ದೂರದ ಉಪ್ಪಿನಂಗಡಿಗೆ ರಾತ್ರಿ ವೇಳೆ ಕಾಲ್ನಡಿಗೆಯಲ್ಲೇ ಬಂದ ಮಹಿಳೆಯ ಮನಸ್ಸನ್ನು ಅರಿತ ಅವರ ಸಾಕು ಶ್ವಾನ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದೆ. ಸೇತುವೆಯಿಂದ ನದಿಗೆ ಹಾರಲು ಮುಂದಾಗಿದ್ದ ಮಹಿಳೆ ಧರಿಸಿದ್ದ ಉಡುಗೆಯನ್ನು ಕಚ್ಚಿ ಹಿಡಿದೆಳೆದಿದೆ. ಮಾತ್ರವಲ್ಲದೆ ನಿರಂತರವಾಗಿ ಬೊಗಳುವ ಮೂಲಕ ಆತ್ಮಹತ್ಯೆಯ ಯತ್ನದಿಂದ ಹಿಂದೆ ಸರಿಯುವಂತೆ ಅನ್ನದಾತೆಯನ್ನು ತನ್ನ ಭಾಷೆಯ ಮೂಲಕ ಒತ್ತಾಯಿಸಿದೆ. ಶ್ವಾನದ ಈ ಚಡಪಡಿಸುವಿಕೆ ಹಾಗೂ ಆಕೆಯ ಉಡುಪನ್ನು ಕಚ್ಚಿ ಎಳೆಯುತ್ತಿದ್ದನ್ನು ಕಂಡ ರಿಕ್ಷಾ ಚಾಲಕನಿಗೆ ಇಲ್ಲೇನೊ ಅಹಿತಕರ ಘಟನೆ ನಡೆಯಲಿದೆ ಎಂಬ ಭಾವನೆ ಮೂಡಿದೆ. ಇಂತಹದೊಂದು ಭಾವನೆ ಮೂಡುತ್ತಲೇ ಎರಡನೇ ಯೋಚನೆ ಮಾಡದೆ ತಕ್ಷಣ ಫಯಾಜ್ ರವರಿಗೆ ಕಾಲ್‌ ಮಾಡಿ ತಿಳಿಸಿದ್ದಾರೆ.  ಸೂಕ್ಷ್ಮ ಸಂವೇದನೆಯನ್ನು ಅರಿತ ಮೂಕಪ್ರಾಣಿಯ ಬೊಗಳುವಿಕೆ, ತುತ್ತು ನೀಡಿದ ಮನೆಯೊಡತಿಯನ್ನು ರಕ್ಷಿಸಬೇಕೆಂಬ ಆ ಶ್ವಾನದ ತುಡಿತ ಮತ್ತು ಪ್ರಯತ್ನ ಜವರಾಯನ ತೆಕ್ಕೆ ಸೇರಲಿದ್ದ ಮಹಿಳೆಯ ರಕ್ಷಣೆಗೆ ಕಾರಣವಾಗಿದೆ ಎಂಬುದು ಇಂಟ್ರೆಸ್ಟಿಂಗ್‌ ವಿಷಯ.   

ಬಾಡಿಗೆ ಮನೆಯಲ್ಲಿ ಇದ್ದಾಗ ಇದ್ದ ಅನುರಾಗ: ಸ್ವಂತ ಮನೆಯಲ್ಲಿ ಮರೆಯಾಯಿತು! 

ಪತಿಯನ್ನು ಹದಿನಾರು ವರ್ಷಗಳ ಹಿಂದೆ ಮನಸಾರೆ ಪ್ರೀತಿಸಿ, ಮದುವೆಯಾಗಿ 300 ಕಿ.ಮೀ. ದೂರದ ಬೆಂಗಳೂರಿನಿಂದ ಬಂದು ಸಂಸಾರ ನಡೆಸುತ್ತಿದ್ದ ಈಕೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಹದಿನೈದು ವರ್ಷಗಳ ಕಾಲ ಸಂತಸದಿಂದಲೇ ಜೀವನ ನಡೆಸಿದ್ದರು. ಪತಿಗೆ ತನ್ನ ಪಿತ್ರಾರ್ಜಿತ ನೆಲೆಯಲ್ಲಿ ದೊರೆತ ಆಸ್ತಿಯಲ್ಲಿ ಸ್ವಂತ ಮನೆಯನ್ನು ಕಟ್ಟಿ, ಕೃಷಿ ಕೃತಾವಳಿ ನಡೆಸುತ್ತಾ ಸ್ವಾಭಿಮಾನಿ ಜೀವನ ನಡೆಸಲು ಪ್ರಾರಂಭಿಸಿದ ಇತ್ತೀಚಿನ ಒಂದು ವರ್ಷದಲ್ಲ್ಲಿ ಪತಿ -ಪತ್ನಿಯ ನಡುವಿನ ಅನುರಾಗ ಮರೆಯಾಗಿ ದ್ವೇಷ ಮೂಡಿರುವುದು ವಿಸ್ಮಯ ಮೂಡಿಸಿದೆ. ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದರೂ ಕ್ಷುಲ್ಲಕ ವಿಚಾರದಲ್ಲಿ ಜೀವನವನ್ನು ಕೊನೆಗೊಳಿಸಲು ಮುಂದಾದ ಮಹಿಳೆಗೆ ಪೊಲೀಸರು ವಿವೇಕ ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಶುಕ್ರವಾರದಂದು ಪತಿ – ಪತ್ನಿಯನ್ನು ಕರೆಯಿಸಿ ಪೊಲೀಸರು ಕೌನ್ಸಿಲಿಂಗ್ ನಡೆಸಿದ್ದಾರೆ. ಮಕ್ಕಳಿಬ್ಬರು ತಂದೆಯೊಂದಿಗೆ ಇರಲು ಇಚ್ಚಿಸಿದರೆ, ಆಕೆ ತನ್ನ ತಾಯಿಯ ಜೊತೆ ಹೋಗುವುದಾಗಿ ತಿಳಿಸಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here