ಮಂಗಳೂರು/ವಾಷಿಂಗ್ಟನ್: ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಅವರ ಸಹಯಾತ್ರಿ ಬಚ್ ವಿಲ್ಮೋರ್ ಅವರು ಇನ್ನು ಕೆಲ ದಿನಗಳ ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿಯಲಿದ್ದಾರೆ ಎಂದು ನಾಸಾ ತಿಳಿಸಿದೆ.
ಜೂ. 5ರಂದು ಸುನಿತಾ ಮತ್ತು ವಿಲ್ಮೋರ್ ಅವರಿದ್ದ ‘ಸ್ಟಾರ್‌ಲೈನರ್’ ನೌಕೆಯನ್ನು ಫ್ಲಾರಿಡಾದ ‘ಕೇಪ್ ಕ್ಯಾನವೆರಲ್ ಸ್ಪೇಸ್ ಫೋರ್ಸ್’ ಕೇಂದ್ರದಿಂದ ಉಡಾವಣೆ ಮಾಡಲಾಗಿತ್ತು. ಜೂ. 6ರ ಮಧ್ಯಾಹ್ನ 1.34ಕ್ಕೆ ಗಗನನೌಕೆಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಡಾಕ್ ಮಾಡಲಾಗಿತ್ತು. ತಾಂತ್ರಿಕ ದೋಷಕ್ಕೆ ಕಾರಣಗಳೇನು ಎಂಬ ಬಗ್ಗೆ ಪರೀಕ್ಷೆಗಳು ನಡೆಯುತ್ತಿದ್ದು, ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ ಎಂದು ನಾಸಾ ತಿಳಿಸಿದೆ. ಆದರೆ, ಗಗನಯಾತ್ರಿಗಳು ಯಾವಾಗ ಭೂಮಿಗೆ ಹಿಂದಿರುಗಲಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
ನಾವು ಭೂಮಿಗೆ ಹಿಂದಿರುಗುವ ಕುರಿತಂತೆ ಆತುರಪಡುತ್ತಿಲ್ಲ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮದ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಹೇಳಿದ್ದು ಡಾಕಿಂಗ್ ಮಾಡುವ ವೇಳೆ ಥ್ರಸ್ಟರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದೆ. ಅಲ್ಲದೇ ಉಡಾವಣೆ ವೇಳೆ ಹೀಲಿಯಂ ಸೋರಿಕೆಯೂ ಆಗಿದೆ. ಇವೆರಡರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಡಾಕಿಂಗ್ ಸಮಯದಲ್ಲಿ ಸಂಭವಿಸಿದ ಪರಿಸ್ಥಿತಿಯ ಬಗ್ಗೆ ತಿಳಿಯಲು ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಬಚ್ ಮತ್ತು ಸುನಿತಾ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿಲ್ಲ ಎಂದು ಸ್ವಿಚ್ ತಿಳಿಸಿದ್ದಾರೆ.