ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ದ ಸತತ ಏಳು ವರ್ಷ ಹೋರಾಟ ನಡೆಸಿ ತೆರವುಗೊಳಿಸುವುದರಲ್ಲಿ ಯಶಸ್ವಿಯಾಗಿದ್ದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ 101 ಸದಸ್ಯರ ಮೇಲೆ ಅಂದಿನ ಬಿಜೆಪಿ ಸರಕಾರ ಮೊಕದ್ದಮೆ ಹೂಡಿತ್ತು. ಈಗ ನ್ಯಾಯಾಲಯದಿಂದ ಸಮನ್ಸ್ ಜಾರಿಯಾದ ಹಿನ್ನಲೆಯಲ್ಲಿ ಇಂದು ಹೋರಾಟಗಾರರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು.
ಹೋರಾಟಗಾರಿಗೆ ಯುವ ಉದ್ಯಮಿ ಪ್ರಜ್ವಲ್ ಕುಳಾಯಿ ತಮ್ಮ ಜಮೀನಿನ ದಾಖಲೆಯ ಮೂಲಕ ಜಾಮೀನು ಭದ್ರತೆ ಒದಗಿಸಿದರು. ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದಲ್ಲಿ ಚರಣ್ ಶೆಟ್ಟಿ ಪಂಜಿಮೊಗರು, ಅಶ್ವಿನಿ ಹೆಗ್ಡೆ, ನಿತಿನ್ ಕುತ್ತಾರ್, ಅನ್ನು ಮಲಿಕ್, ಮನೋಜ್ ವಾಮಂಜೂರು, ಹಸೈನಾರ್ ಗುರುಪುರ, ಶೆರ್ವಿನ್ ಸೊಲೊಮನ್ ಮುಂತಾದ ಯುವ ನ್ಯಾಯವಾದಿಗಳ ತಂಡ ಹೋರಾಟಗಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾದರು.
ಮಾಜಿ ಸಚಿವ ಅಭಯ ಚಂದ್ರ ಜೈನ್, ಕಿಶನ್ ಹೆಗ್ಡೆ ಕೊಲ್ಕೆಬೈಲ್, ರಘು ಎಕ್ಕಾರು ಸಹಿತ ಹೋರಾಟ ಸಮಿತಿಯ ಹಲವು ಪ್ರಮುಖರು ನ್ಯಾಯಾಲಯದಲ್ಲಿ ಹಾಜರಿದ್ದು ನ್ಯಾಯಾಲಯಕ್ಕೆ ಹಾಜರಾದ ಹೋರಾಟಗಾರರಿಗೆ ನೈತಿಕ ಬೆಂಬಲ ನೀಡಿದರು.