ಮಂಗಳೂರು (ಬೆಂಗಳೂರು): ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದ್ದಂತೆ ಒಂದರ ಹಿಂದೆ ಒಂದಂತೆ ಹಗರಣಗಳು ಬೆಳಕಿಗೆ ಬರುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾ ಹಗರಣ, ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯಲ್ಲಿ, ಅಪೆಕ್ಸ್ ಬ್ಯಾಂಕ್ನಲ್ಲಿ ನಡೆದ ಹಗರಣಗಳು ಸದ್ದು ಮಾಡುತ್ತಿರುವುದರ ನಡುವೆ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ಕರ್ನಾಟಕ ವಕ್ಫ್ ಮಂಡಳಿಯ ಹಣ ಅಕ್ರಮವಾಗಿ ವರ್ಗಾವಣೆಯಾದ ಆರೋಪ ಕೇಳಿ ಬಂದಿದ್ದು, ಮಾಜಿ ಸಿಇಒ ಝುಲ್ಫಿಕಾರುಲ್ಲಾ ವಿರುದ್ಧ ವಕ್ಫ್ ಮಂಡಳಿ ದೂರು ನೀಡಿದೆ. ಮಂಡಳಿ ಮುಖ್ಯ ಲೆಕ್ಕಾಧಿಕಾರಿ ಮೀರ್ ಅಹಮದ್ ಅಬ್ಬಾಸ್ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ವಕ್ಫ್ ಮಂಡಳಿ ಆಸ್ತಿ ಮಾರಾಟ ಸಂಬಂಧ 4 ಕೋಟಿ ರೂ. ಹಣ ಮಂಡಳಿ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಈ ಹಣವನ್ನು ಝುಲ್ಫಿಕಾರುಲ್ಲಾ 2016ರಲ್ಲಿ ಚಿಂತಾಮಣಿಯ ವಿಜಯ ಬ್ಯಾಂಕ್ಗೆ ಸಿಇಒ ಹೆಸರಿನಲ್ಲಿ ಎರಡು ಚೆಕ್ಗಳ ಮೂಲಕ ವರ್ಗಾವಣೆ ಮಾಡಿದ್ದರು. ಇದರಿಂದ ವಕ್ಫ್ ಮಂಡಳಿಗೆ 8 ಕೋಟಿ ರೂ.ನಷ್ಟವಾಗಿದೆ. ಝುಲ್ಫಿಕಾರುಲ್ಲಾ ಅವರು ಮಂಡಳಿಯ ಗಮನಕ್ಕೆ ತರದೆ ಹಣ ವರ್ಗಾವಣೆ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.