ಮಂಗಳೂರು/ಸುಬ್ರಹ್ಮಣ್ಯ: ತೀವ್ರ ಮಳೆಯಿಂದಾಗಿ ಕುಮಾರಧಾರ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಸುಬ್ರಹ್ಮಣ್ಯ- ಪುತ್ತೂರು-ಮಂಜೇಶ್ವರ ಹೆದ್ದಾರಿ ಜಲಾವೃತಗೊಂಡು ಸಂಚಾರ ಕಡಿತಗೊಂಡಿದೆ.
ಘಟ್ಟ ಪ್ರದೇಶ ಹಾಗೂ ಸುಬ್ರಹ್ಮಣ್ಯದಲ್ಲಿ ನಿರಂತರ ಭಾರೀ ಮಳೆಯಾದ ಪರಿಣಾಮ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಸೋಮವಾರ ಕುಕ್ಕೆಯ ಸ್ನಾನಘಟ್ಟ ಮುಳುಗಡೆಯಾಗಿದ್ದು, ಮಂಗಳವಾರವೂ ಅದೇ ರೀತಿಯಿದ್ದು ನೀರಿನ ಪ್ರಮಾಣ ಏರಿಕೆಯಾಗಿದೆ. ನೀರಿನ ಮಟ್ಟ ಹೆಚ್ಚಿರುವ ಹಿನ್ನೆಲೆಯಲ್ಲಿ ನದಿ ನೀರಿಗೆ ಇಳಿಯಲು ನಿರ್ಬಂಧಿಸಲಾಗಿದ್ದು, ನದಿ ದಡದಲ್ಲಿ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ತೀರ್ಥ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸ್ಥಳದಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ಹೋಮ್‌ಗಾರ್ಡ್ ಹಾಗೂ ದೇವಸ್ಥಾನದ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗಿದೆ. ಸೋಮವಾರ ಇಡೀ ದಿನ ಹಾಗೂ ಮಂಗಳವಾರ ಬೆಳಿಗ್ಗೆಯಿಂದ ಕುಕ್ಕೆ ಪರಿಸರದಲ್ಲಿ ಧಾರಕಾರ ಮಳೆಯಾಗಿದ್ದು, ಪರಿಸರದ ನದಿ, ತೋಡುಗಳು ತುಂಬಿ ಹರಿಯುತ್ತಿವೆ.
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವ ಜನಿಕರು, ಪ್ರವಾಸಿಗರು ತೆರಳದಂತೆ ಜಿಲ್ಲಾಡಳಿತ ಸೂಚಿಸಿದೆ. ತುರ್ತು ಸಂದರ್ಭದಲ್ಲಿ ಜಿಲ್ಲಾಡಳಿತದ 24×7 ಕಂಟ್ರೋಲ್ ರೂಂ ಟೋಲ್ ಫ್ರೀ ಸಂಖ್ಯೆ 1077 ಅಥವಾ 0824-2442590ನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ. ಹವಾಮಾನ ಇಲಾಖೆ ಕರಾವಳಿಗೆ ಮಂಗಳವಾರವೂ ರೆಡ್ ಅಲರ್ಟ್ ಘೋಷಿಸಿದ್ದು, ಗಾಳಿ-ಮಳೆ ಮುಂದು ವರಿಯುವ ಸಾಧ್ಯತೆಯಿದೆ. ಬಂಗಾಳ ಕೊಲ್ಲಿಯ ವಾಯವ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಲ ಕೊಲ್ಲಿ, ಒಡಿಸ್ಸಾ ತೀರಕ್ಕೆ ಹೊಂದಿಕೊಂಡಂತೆ ಕಡಿಮೆ ಒತ್ತಡ ಪ್ರದೇಶವೂ ನಿರ್ಮಾಣವಾಗಿದೆ ಇದು ಕೂಡ ಮಳೆ ಹೆಚ್ಚಳಕ್ಕೆ ಕಾರಣವಾಗಿದೆ.