ಮಂಗಳೂರು/ಮುಂಬೈ: ಲೇಖನ ಸಾಮಗ್ರಿಗಳ ಪ್ರತಿಷ್ಠಿತ ತಯಾರಿಕಾ ಸಂಸ್ಥೆ ಕ್ಯಾಮ್ಲಿನ್‌ನ ಸಂಸ್ಥಾಪಕ ಸುಭಾಷ್ ದಾಂಡೇಕರ್(86) ಜು.15ರಂದು ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಜನಪ್ರಿಯ ಲೇಖನ ಸಾಮಗ್ರಿ ತಯಾರಿಕಾ ಸಂಸ್ಥೆಯಾದ ಕ್ಯಾಮ್ಲಿನ್ ಅನ್ನು ಜಪಾನಿನ ಕೊಕುಯೊಗೆ ಮಾರಾಟ ಮಾಡಿದ ನಂತರ, ದಾಂಡೇಕರ್ ಕೊಕುಯೊ ಕ್ಯಾಮ್ಲಿನ್ ಸಂಸ್ಥೆಯ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಸೆಂಟ್ರಲ್ ಮುಂಬೈನಲ್ಲಿ ಸುಭಾಷ್ ದಾಂಡೇಕರ್ ಅವರ ಅಂತ್ಯಕ್ರಿಯೆ ನಡೆಸಲಾಗಿದ್ದು ಜು.18ರಂದು ಸಂತಾಪ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಳೆದ ಮೂರು ದಶಕಗಳಿಂದ ಕ್ಯಾಮ್ಲಿನ್ ಲೇಖನ ಸಾಮಗ್ರಿಗಳು ಮಕ್ಕಳ ನಡುವೆ ಅತ್ಯಂತ ಜನಪ್ರಿಯವಾಗಿದ್ದವು. ಕ್ಯಾಮ್ಲಿನ್ ಕಂಪಾಸ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಈಗಲೂ ಅತ್ಯಂತ ಬೇಡಿಕೆಯ ಲೇಖನ ಸಾಮಗ್ರಿಗಳಾಗಿ ಉಳಿದುಕೊಂಡು ಬಂದಿವೆ.