ಉಕ್ಕಿ ಹರಿಯುತ್ತಿರುವ ನದಿ ನೀರಿನಲ್ಲಿ ಸಿಲುಕಿದ್ದ ಮೈಸೂರಿನ 4 ಮಂದಿಯ ರಕ್ಷಣೆ – ಕೇರಳ ಅಗ್ನಿಶಾಮಕ ದಳದ ಸಾಹಸಮಯ ಕಾರ್ಯಾಚರಣೆ

ಮಂಗಳೂರು/ಪಾಲಕ್ಕಾಡ್:‌ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ಚಿತ್ತೂರು ನದಿಯ ನಡುವೆ ಇರುವ ಬಂಡೆಯೊಂದರಲ್ಲಿ ಸಿಲುಕಿಕೊಂಡಿದ್ದ ವೃದ್ಧರೊಬ್ಬರ ಸಹಿತ ನಾಲ್ಕು ಮಂದಿಯನ್ನು ಅಗ್ನಿಶಾಮಕ ಸಿಬ್ಬಂದಿ ಸಾಹಸಮಯ ಕಾರ್ಯಾಚರಣೆಯೊಂದರಲ್ಲಿ  ರಕ್ಷಿಸಿದ್ದಾರೆ.

ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮೂಲತ್ತರ ರೆಗ್ಯುಲೇಟರ್‌ ಪ್ರದೇಶದಲ್ಲಿ ನೀರನ್ನು ಬಿಡುಗಡೆಗೊಳಿಸಿದ್ದರಿಂದ ಚಿತ್ತೂರು ನದಿಯ ನೀರಿನ ಮಟ್ಟ ಏರಿಕೆಯಾಗಿತ್ತು. ನೀರಿಗೆ ಇಳಿಯದಂತೆ ಎಚ್ಚರಿಕೆಗಳನ್ನು ನೀಡಲಾಗಿದ್ದರೂ ಮೈಸೂರಿನ ನಿವಾಸಿಗಳಾದ ನಾಲ್ಕು ಮಂದಿಯೂ ನದಿ ನೀರಿಗಿಳಿದ್ದು, ದಿಢೀರ್‌ ಎಂದು ನೀರಿನ ಮಟ್ಟ ಏರಿಕೆಯಾದಾಗ ಬಂಡೆಯಲ್ಲಿಯೇ ಸಿಲುಕಿಕೊಂಡಿದ್ದರು.

ಕೇರಳ ವಿದ್ಯುತ್‌ ಸಚಿವ ಕೃಷ್ಣನ್‌ ಕುಟ್ಟಿ ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಎಚ್ಚರಿಕೆಯಿಂದ ಬಂಡೆ ತನಕ ತಲುಪಿ ಬಂಡೆಗೂ ನದಿ ತೀರಕ್ಕೂ ಹಗ್ಗದ ಮೂಲಕ ಸಂಪರ್ಕ ಕಲ್ಪಿಸಿದ್ದರು. ಅಲ್ಲಿದ್ದ ನಾಲ್ಕು ಮಂದಿಗೂ ಲೈಫ್‌ ಜಾಕೆಟ್‌ ತೊಡಿಸಿ, ಇನ್‌ಫ್ಲೇಟೇಬಲ್‌ ರೆಸ್ಕ್ಯೂ ಟ್ಯೂಬ್‌ಗಳ ಸಹಾಯದೊಂದಿಗೆ ಅವರನ್ನು ನದಿ ದಂಡೆಗೆ ಸುರಕ್ಷಿತವಾಗಿ ಕರೆತರಲಾಯಿತು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here