ಮಂಗಳೂರು/ಲಕ್ನೋ: ಉತ್ತರ ಪ್ರದೇಶದ ಪೊಲೀಸ್ ಠಾಣೆಯ ಒಳಗಡಯೇ ವ್ಯಕ್ತಿಯೊಬ್ಬ ತನ್ನ ತಾಯಿಗೆ ಬೆಂಕಿ ಹಚ್ಚಿ ಸಾಯಿಸಲು ಪ್ರಯತ್ನ ಪಟ್ಟ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಬೆಂಕಿ ಆರಿಸಲು ಪ್ರಯತ್ನ ನಡೆಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಶೇ.40ರಷ್ಟು ಸುಟ್ಟುಗಾಯದೊಂದಿಗೆ ಆಸ್ಪತ್ರೆ ಸೇರಿದ್ದ ಹೇಮಲತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಲೀಗಢದ ಖೈರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಠಾಣೆಯ ಸಿಸಿಟಿವಿಯಲ್ಲಿ ಈ ವಿಡಿಯೋ ದಾಖಲಾಗಿದೆ. ಪೊಲೀಸ್ ಠಾಣೆಗೆ ಬಂದ ಮಹಿಳೆಗೆ ಪೆಟ್ರೋಲ್ ಸುರಿದು ಪಕ್ಕದಲ್ಲಿದ್ದ ವ್ಯಕ್ತಿ ಬೆಂಕಿ ಹಚ್ಚಿದ ದೃಶ್ಯ ವಿಡಿಯೋದಲ್ಲಿದೆ. ಬೆಂಕಿ ಹಂಚಿದ ವ್ಯಕ್ತಿಯನ್ನು ಮಹಿಳೆಯ ಪುತ್ರ ಗೌರವ್ ಎಂದು ಪೊಲೀಸರು ದೃಢಪಡಿಸಿದ್ದು 22 ವರ್ಷದ ಪುತ್ರನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ಸಂಜೀವ್ ಸುಮನ್ ಹೇಳಿದ್ದಾರೆ.
ಭೂಮಿಗೆ ಸಂಬಂಧಿಸಿದ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಮಹಿಳೆ ದೂರು ದಾಖಲಿಸಿದ್ದರು. ಇದಕ್ಕೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಎರಡೂ ಬಣಗಳು ಠಾಣೆಗೆ ಆಗಮಿಸಿದ್ದವು. ಆದರೆ ಸಹಮತಕ್ಕೆ ಬರಲು ವಿಫಲವಾದ ಕಾರಣ ಮಹಿಳೆ ಠಾಣೆಯಿಂದ ಹೊರಕ್ಕೆ ಹೋಗಿದ್ದರು. ಮಹಿಳೆ ಮತ್ತೆ ಠಾಣೆಗೆ ಬಂದಾಗ ಮಗ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಲೈಟರನ್ನು ಕಸಿದುಕೊಳ್ಳಲು ಯತ್ನಿಸಿದಾಗ, ಅದು ನೆಲದ ಮೇಲೆ ಬಿದ್ದಿದ್ದು, ಒಂದು ಕೈಯಲ್ಲಿ ಮೊಬೈಲ್ ಹಿಡಿದಿದ್ದ ಮಗ ಅದನ್ನು ಎತ್ತಿಕೊಂಡು ತಾಯಿಗೆ ಬೆಂಕಿ ಹಚ್ಚುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಬೆಂಕಿಯ ಕೆನ್ನಾಲಿಗೆ ಠಾಣೆಯಲ್ಲಿ ವ್ಯಾಪಿಸಿದಾಗ ಎಲ್ಲರೂ ಹಿಂದಕ್ಕೆ ಸರಿದಿದ್ದಾರೆ. ಮಗ ನೆಲಕ್ಕೆ ಬಿದ್ದಿದ್ದು, ತಕ್ಷಣ ಎದ್ದು ದೂರ ಓಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
https://x.com/Rajtyag04068412/status/1813301119122280834