ತಡರಾತ್ರಿ ವಾಹನದಲ್ಲಿ ಬಂಧಿಯಾಗಿದ್ದ ಪ್ರಯಾಣಿಕರಿಗೆ ಆಪತ್ಬಾಂಧವರಾದ ಸ್ಪೀಕರ್ ಯು.ಟಿ. ಖಾದರ್ – ಜನ ಮೆಚ್ಚುಗೆಗೆ ಪಾತ್ರರಾದ ದ.ಕ ಜಿಲ್ಲಾಧಿಕಾರಿ ಮತ್ತು ಮಡಿಕೇರಿ ಎಸ್ಪಿ 

ಮಂಗಳೂರು: ಭಾರೀ ಮಳೆಯಿಂದಾಗಿ ಮಡಿಕೇರಿ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಹಿನ್ನಲೆಯಲ್ಲಿ ಐದು ತಾಸುಗಳಿಂದ ಮಧ್ಯರಾತ್ರಿ ಅರಣ್ಯದ ನಡುವೆ ತಮ್ಮ ವಾಹನಗಳಲ್ಲಿ ಬಂಧಿಯಾಗಿದ್ದ ನೂರಾರು ಜನರಿಗೆ ಮಧ್ಯ ರಾತ್ರಿ ಮುಕ್ತಿ ದೊರಕಿಸುವಲ್ಲಿ ಸ್ಪೀಕರ್‌ ಯು.ಟಿ ಖಾದರ್‌ ಯಶಸ್ವಿಯಾಗಿದ್ದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಮಡಿಕೇರಿ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜನ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಮುನ್ನೆಚ್ಚರಿಕಾ ಕ್ರಮವಾಗಿ ಮೈಸೂರು-ಮಾಣಿ ಹೆದ್ದಾರಿಯ ಮಡಿಕೇರಿ ಘಾಟ್ ನ್ನು ಜು.18ರ ರಾತ್ರಿ 8 ಗಂಟೆಗೆ ಯಾವುದೇ ಮುನ್ಸೂಚನೆ ನೀಡದೇ ಕೊಡಗು ಮತ್ತು ದ.ಕ. ಜಿಲ್ಲಾಡಳಿತ ಬಂದ್ ಮಾಡಿತ್ತು. ಮಡಿಕೇರಿ ಜನರಲ್ ಕಾರ್ಯಪ್ಪ ಸರ್ಕಲ್ ಬಳಿ ಮತ್ತು ಘಾಟಿ ಮಧ್ಯೆ ಮದೆನಾಡಿನಲ್ಲಿ ಹಾಗೂ ಸಂಪಾಜೆ ಚೆಕ್ ಪೋಸ್ಟ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದರು. ಯಾವುದೇ ಮುನ್ಸೂಚನೆ ಇಲ್ಲದಿರುವುದರಿಂದ ನೂರಾರು ವಾಹನಗಳು ಉಭಯ ದಿಕ್ಕಿನಲ್ಲಿ ಸಾಲುಗಟ್ಟಿ ನಿಂತಿದ್ದವು. ಇದರಿಂದ ಎರಡೂ ಕಡೆಗಳಲ್ಲಿ ವಾಹನಗಳಲ್ಲಿದ್ದ ಮಹಿಳೆಯರು, ಮಕ್ಕಳು ಘಾಟ್ ಮಧ್ಯೆ ಮದೆನಾಡು ಮತ್ತು ಸಂಪಾಜೆಯ ಕುಗ್ರಾಮದಲ್ಲಿ ಬಾಕಿಯಾಗಿದ್ದರು. ವಾಹನದಲ್ಲಿದ್ದ ಹಿರಿಯ ಜೀವಗಳೂ ಇದರಿಂದ ತೊಂದರೆ ಅನುಭವಿಸುವಂತಾಗಿತ್ತು.

ಮುನ್ನೆಚ್ಚರಿಕಾ ಕ್ರಮವಾಗಿ ಹಠಾತ್ ರಸ್ತೆ ನಿರ್ಬಂಧ ಮಾಡಲಾಗಿದ್ದು ಪ್ರಯಾಣಿಕರು ಅನುಭವಿಸುತ್ತಿದ್ದ ಕಷ್ಟವನ್ನು ಅರಿತ, ಅದೇ ರಸ್ತೆಯಾಗಿ  ಪ್ರಯಾಣಿಸುತ್ತಿದ್ದ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ವಿಷಯದ ಗಂಭೀರತೆಯನ್ನು ಸ್ಪೀಕರ್ ಯು.ಟಿ.ಖಾದರ್ ಗಮನಕ್ಕೆ ತರುತ್ತಾರೆ. ಮಧ್ಯರಾತ್ರಿ 12.30 ರ ವೇಳೆ ಮೊಬೈಲ್‌ ಕರೆಗೆ ಸ್ಪಂದಿಸಿದ ಯು.ಟಿ.ಖಾದರ್ ತಕ್ಷಣ ಮಂಗಳೂರು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಅವರಿಗೆ ಸೂಚನೆ ನೀಡಿ, ವಸ್ತುಸ್ಥಿತಿಯನ್ನು ಅಧಿಕಾರಿಗಳಿಗೆ ವಿವರಿಸುವಂತೆ  ರಶೀದ್ ಗೆ ತಿಳಿಸುತ್ತಾರೆ. ಅದರಂತೆ ಜಿಲ್ಲಾಧಿಕಾರಿ ಹಾಗೂ ಎಸ್ಪಿಯವರನ್ನು ಫೋನ್ ಮೂಲಕ ಸಂಪರ್ಕಿಸಿದ ರಶೀದ್‌ ವಿಟ್ಲ ಜನರಿಗಾದ ತೊಂದರೆ ಮತ್ತು ಪರಿಣಾಮಗಳ ಬಗ್ಗೆ ಗಮನ ಸೆಳೆಯುತ್ತಾರೆ. ಹಠಾತ್ ರಸ್ತೆ ಬಂದ್ ನಿಂದ ವಾಹನ ಪ್ರಯಾಣಿಕರಿಗೆ ಆಗಿರುವ ತೊಂದರೆ, ಮಹಿಳೆಯರಿಗೆ ಶೌಚಾಲಯದ ಸಮಸ್ಯೆ, ಎಮರ್ಜೆನ್ಸಿ ರೋಗಿಗಳ ಆಕ್ರಂದನ, ನಿತ್ಯ ಬಳಕೆಯ ವಸ್ತುಗಳ ಗೂಡ್ಸ್ ಲಾರಿಗಳ ಪರದಾಟ, ಮಳೆಯಲ್ಲಿ ಕಾಡು ಮಧ್ಯೆ ವಾಹನದಲ್ಲಿರುವ ವಯಸ್ಕರು, ಮಕ್ಕಳು ಸೇರಿದಂತೆ ಪರಿಸ್ಥಿತಿಯ ಗಂಭೀರತೆಯನ್ನು ಮನದಟ್ಟು ಮಾಡಿ ಅರಿವು ಮೂಡಿಸಿದ ಪರಿಣಾಮ ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಅತಂತ್ರ ಸ್ಥಿತಿಯಲ್ಲಿದ್ದ ಎಲ್ಲಾ ವಾಹನಗಳನ್ನು ರಾತ್ರಿ 1.30ರ ಸುಮಾರಿಗೆ ಪೊಲೀಸ್ ಎಸ್ಕಾರ್ಟ್ ಕಣ್ಗಾವಲಲ್ಲಿ ಸುರಕ್ಷಿತವಾಗಿ ಮದೆನಾಡು ಪ್ರದೇಶದಿಂದ ಸಂಪಾಜೆವರೆಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಅದೇ ರೀತಿ ಸಂಪಾಜೆಯಿಂದ ಮಡಿಕೇರಿ ಕಡೆ ಹೋಗಬೇಕಾಗಿದ್ದ ವಾಹನಗಳನ್ನು ಅದೇ ಪೊಲೀಸ್ ಎಸ್ಕಾರ್ಟ್ ನಲ್ಲಿ ಮಡಿಕೇರಿಗೆ ಸುರಕ್ಷಿತವಾಗಿ ತಲುಪಿಸುತ್ತಾರೆ.

ಇದರಿಂದಾಗಿ ನೂರಾರು ವಾಹನಗಳಲ್ಲಿದ್ದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಯಿತು. ಜನ ಸಾಮಾನ್ಯರ ಕೂಗಿಗೆ ತಳಮಟ್ಟದ ಅಧಿಕಾರಿಗಳು ಫೋನ್ ಕರೆ ಸ್ವೀಕರಿಸದೆ ಸ್ಪಂದಿಸದೇ ಇರುವ ಈ ಕಾಲದಲ್ಲಿ ರಾಜಕಾರಣಿ ಮತ್ತು ಉನ್ನತ ಅಧಿಕಾರಿಗಳು ಹೇಗೆ ಸ್ಪಂದಿಸಬೇಕು ಎಂದು ತಡರಾತ್ರಿಯೂ ಫೋನ್ ಕರೆ ಸ್ವೀಕರಿಸಿ ತಕ್ಷಣ ಸ್ಪಂದಿಸಿರುವ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಕೊಡಗು ಎಸ್ಪಿ ರಾಮರಾಜನ್ ಹಾಗೂ ಕೊಡಗು ಪೊಲೀಸರು ಇತರರಿಗೆ ಮಾದರಿಯಾಗಿದ್ದು  ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here