ಮಂಗಳೂರು/ದೆಹಲಿ: ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಿ, ಮರುಪರೀಕ್ಷೆ ನಡೆಸಬೇಕೆಂದು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಯಲಾಗಿರುವ ಹಿನ್ನೆಲೆ ಮೇ 5 ರಂದು ನಡೆಸಲಾಗಿದ್ದ ನೀಟ್ ಪರೀಕ್ಷೆಯನ್ನು ರದ್ದು ಮಾಡಿ, ಮರು ಪರೀಕ್ಷೆ ನಡೆಸಲು ಆದೇಶ ನೀಡುವಂತೆ ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿದೆ. ಹೊಸದಾಗಿ ಮತ್ತೆ ಪರೀಕ್ಷೆ ನಡೆಸುವುದು ಈಗ ಇರುವ 20 ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಕ್ರಮ ದೇಶವ್ಯಾಪಿ ನಡೆದಿಲ್ಲ. ಮರು ಪರೀಕ್ಷೆಗೆ ಆದೇಶಿಸಲು ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಕೋರ್ಟು ತನ್ನ ತೀರ್ಪಿನಲ್ಲಿ ಹೇಳಿದೆ.