ಮಂಗಳೂರು:ಮುಂದಿನ 15 ದಿನಗಳಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳದಿದ್ದಲ್ಲಿ ನಗರ ಪಾಲಿಕೆ ಮತ್ತು ಜಿಲ್ಲಾಢಳಿತದ ವಿರುದ್ಧ ಸರಣಿ ಹೋರಾಟ ನಡೆಸುವುದಾಗಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಎಚ್ಚರಿಕೆ ನೀಡಿದೆ. ನಗರದ ಜ್ಯೋತಿ ಸರ್ಕಲ್ ನಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಕಾರ್ಯವು ವಿಳಂಬವಾಗುತ್ತಿದ್ದು, ಜಿಲ್ಲಾಡಳಿತ ಮತ್ತು ನಗರಾಡಳಿತವು ಸಂವಿಧಾನ ಶಿಲ್ಪಿ, ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಪತ್ರಿಕಾಗೋಷ್ಠಯಲ್ಲಿ ಮಾತನಾಡಿದ ದಲಿತ ಸಂಘಟನೆಯ ಮುಖಂಡರು, ಜಿಲ್ಲಾಡಳಿತ ಮತ್ತು ನಗರಪಾಲಿಕೆಯ ದಲಿತ ವಿರೋಧಿ ಆಡಳಿತವನ್ನು ವಿರೋಧಿಸಿ ಸರಣಿ ಹೋರಾಟ ನಡೆಸುವುದಾಗಿ ಹೇಳಿದ್ದಾರೆ.1994ರಲ್ಲಿ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಭರತ್‌ಲಾಲ್ ಮೀನಾ ತಮ್ಮ ಮುತುವರ್ಜಿಯಿಂದ ನಗರದ ಜ್ಯೋತಿಯಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣ ಮಾಡಲು ತೀರ್ಮಾನವನ್ನು ಕೈಗೊಂಡಿದ್ದರು. ಬಳಿಕ ನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಂಗೀಕೃತಗೊಂಡು ವೃತ್ತ ನಿರ್ಮಾಣಕ್ಕಾಗಿ ಸ್ಥಳ ವೀಕ್ಷಣೆ ನಡೆಸಿ ಅಂಬೇಡ್ಕರ್‌ರವರ ಪುತ್ಥಳೀಯ ಜೊತೆ ವೃತ್ತ ನಿರ್ಮಾಣ ಮಾಡುವ ಬಗ್ಗೆ ಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು.ಆನಂತರದಲ್ಲಿ ವೃತ್ತ ನಿರ್ಮಾಣ ಮಾಡಲು ಜಿಲ್ಲಾಡಳಿತವಾಗಲೀ ಅಥವಾ ನಗರ ಪಾಲಿಕೆಯಾಗಲೀ ಆಸಕ್ತಿ ವಹಿಸದೆ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ.
ಕಳೆದ 30 ವರ್ಷಗಳಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಜಿಲ್ಲಾ ಮತ್ತು ನಗರ ಮಟ್ಟದ ಪ್ರತೀ ಸಭೆಗಳಲ್ಲಿ ಈ ಬಗ್ಗೆ ಒತ್ತಾಯಿಸುತ್ತಾ ಬಂದಿರುವ ಪರಿಣಾಮವಾಗಿ ನಗರ ಪಾಲಿಕೆಯು ಸ್ಮಾರ್ಟ್ ಸಿಟಿ ಯೋಜನೆಯನ್ವಯ ಅಂಬೇಡ್ಕರ್ ವೃತ್ತ
ನಿರ್ಮಾಣ ಮಾಡುವುದಾಗಿ ಪಾಲಿಕೆ ತಿಳಿಸಿತ್ತು. ಸ್ಮಾರ್ಟ್ ಸಿಟಿ ಯೋಜನೆಯು ನಗರಕ್ಕೆ ಬಂದು 4 ವರ್ಷ ಕಳೆದಿದೆ. ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಜೇಶ್ವರ ಗೋವಿಂದ ಪೈ ವೃತ್ತ, ನಾರಾಯಣ ಗುರು ವೃತ್ತ, ಕೋಟಿ ಚೆನ್ನಯ್ಯ ವೃತ್ತ, ಸರ್ವಜ್ಞ ವೃತ್ತಗಳೆಲ್ಲ ಅದ್ದೂರಿಯಾಗಿ ನಿರ್ಮಾಣಗೊಂಡಿದೆ. ಆದರೆ ವಿಶ್ವ ನಾಯಕ ಸಂವಿಧಾನ ಶಿಲ್ಪಿ ಅಂಬೇಡ್ಕರ್ ವೃತ್ತ ಮಾಡಲು ಇಲ್ಲಿನ ಆಡಳಿತಕ್ಕೆ ಸಾಧ್ಯವಾಗದಿರುವುದು ಜಿಲ್ಲಾಡಳಿತ ಮತ್ತು ನಗರಾಡಳಿತವು ಶೋಷಿತ ಸಮಾಜದ ಓರ್ವ ಮಹಾನಾಯಕನಿಗೆ ಮಾಡಿರುವ ಅವಮಾನ ಮತ್ತು ಮಹಾ ಅನ್ಯಾಯ ಇದಾಗಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರಾದ ಎಂ ದೇವರಾಜ್, ರಮೇಶ್ ಕೊಟ್ಯಾನ್, ಅಶೋಕ್ ಕೊಂಚಾಡಿ, ಚಂದ್ರಕುಮಾರ್, ಎಸ್ಪಿ ಆನಂದ್, ರಘು ಎಕ್ಕಾರ್, ಜಿನ್ನಪ್ಪ ಬಂಗೇರ, ಸುದಾಕರ್ ಬೋಳೂರು, ಶೇಖರ್ ಚಿಲಿಂಬಿ,ನಾಗೇಶ್ ಬಲ್ಮಠ, ಆನಂದ ಬೆಳ್ಳಾರೆ, ಗಿರೀಶ್ ಬೆಳ್ಳಾರೆ, ದಿನೇಶ್ ಮುಳೂರು, ಸರೋಜಿನಿ ಬಂಟ್ವಾಳ,ರೋಹಿತ್ ಉಳ್ಳಾಲ್, ಯಶೋಧ, ಪ್ರೇಮ್ ಬಳ್ಳಾಲ್ ಭಾಗ್, ಗಣೇಶ್ ಸೂಟರ್ ಪೇಟೆ, ರೇಣುಕಾ ಕಲ್ಲಾಪು ಮತ್ತೀತರರು ಉಪಸ್ಥಿತರಿದ್ದರು.