ಪ್ರಖರ ಬೆಳಕು ಸೂಸುವ ವಾಹನಗಳ ವಿರುದ್ಧ ಕಾರ್ಯಾಚರಣೆ -ಪ್ರಕರಣ ದಾಖಲು

ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಖರ ಬೆಳಕು ಸೂಸುವ ಹಾಗೂ ಕಣ್ಣು ಕುಕ್ಕುವ ದೀಪಗಳನ್ನು ಅಳವಡಿಸಿ ವಾಹನ ಚಲಾಯಿಸುವುದರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು ಈವರೆಗೆ 1170 ಪ್ರಕರಣಗಳನ್ನು ದಾಖಲಿಸಿ 5,86,500 ರೂ. ದಂಡ ವಿಧಿಸಿದ್ದಾರೆ.

ಜೂ.15ರಿಂದ ನಗರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಲಾರಂಭಿಸಿದ್ದರು. ಅಲ್ಲದೆ ಕೇಂದ್ರ ಮೋಟಾರು ವಾಹನ ಕಾಯ್ದೆ 1989ರಲ್ಲಿ ನಮೂದಿಸಿರುವ ಮಾನದಂಡದಂತೆ ಹೆಡ್‌ಲೈಟ್‌ಗಳನ್ನು ಅಳವಡಿಸದ  ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಲಾಗಿದೆ. ಈ ವಿಶೇಷ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು ಎಂದು ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

  • ವಾಹನ ಚಾಲಕ ಮಾಲಕರಿಗೆ ವಿಶೇಷ ಸೂಚನೆ

*. ಕೇಂದ್ರ ಮೋಟಾರು ವಾಹನ ಕಾಯ್ದೆ-1989ರಲ್ಲಿ ಸೂಚಿಸಿರುವ ಮಾನದಂಡದಂತೆ ವಿವಿಧ ಮಾದರಿಯ ವಾಹನಗಳಿಗೆ ಆಯಾ ವಾಹನ ಕಂಪೆನಿಯವರು ನಿಗದಿಪಡಿಸಿದ ಹೆಡ್‌ಲೈಟ್‌ಗಳನ್ನು ಮಾತ್ರ ಅಳವಡಿಸಬೇಕು.

*.ಹೆಚ್ಚುವರಿಯಾಗಿ ಅಲಂಕಾರಿಕ ದೀಪಗಳು ಹಾಗೂ ಪ್ರಖರ ಬೆಳಕು ಸೂಸುವ ಮತ್ತು ಕಣ್ಣಿಗೆ ಕುಕ್ಕುವ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಬಾರದು.

*.ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಬೀದಿದೀಪಗಳು ಇರುವೆಡೆ ಯಾವುದೇ ಕಾರಣಕ್ಕೂ ಹೈಬೀಮ್ ಬೆಳಕಿನೊಂದಿಗೆ ವಾಹನಗಳನ್ನು ಚಲಾಯಿಸುವಂತಿಲ್ಲ.

*. ಮೋಟಾರು ಸೈಕಲ್ ಹಾಗೂ ಆಟೊ ರಿಕ್ಷಾಗಳು 1 ಅಥವಾ 2 ಹೆಡ್‌ಲೈಟ್‌ಗಳನ್ನು ಮಾತ್ರ ಹೊಂದಬೇಕು.

*.ನಾಲ್ಕು ಚಕ್ರ ಮತ್ತು ಹೆಚ್ಚಿನ ಚಕ್ರದ ವಾಹನಗಳು 2 ಅಥವಾ 4 ಹೆಡ್‌ಲೈಟ್‌ಗಳನ್ನು ಮಾತ್ರ ಹೊಂದಬೇಕು.

*.ವಾಹನಗಳ ಹೆಡ್‌ಲೈಟ್‌ಗಳಿಂದ ಹೊರ ಹೊಮ್ಮವ ಬೆಳಕು ಶಾಶ್ವತವಾಗಿ ಕೆಳಮುಖವಾಗಿ ಹೆಡ್‌ಲೈಟ್‌ನಿಂದ 8 ಮೀಟರ್ ದೂರದಲ್ಲಿನ ವಾಹನದಲ್ಲಿ ಕುಳಿತಿರುವ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ. ಹಾಗೆಯೇ ಸದರಿ ವಾಹನದ ಬಲಭಾಗದಲ್ಲಿ ಅಳವಡಿಸಿರುವ ಹೆಡ್‌ಲೈಟ್‌ನಿಂದ ಬಲಕ್ಕೆ 0.5 ಮೀ ದೂರದಲ್ಲಿ ಕುಳಿತಿರುವ ಎದುರಿನ ವಾಹನದಲ್ಲಿನ ವ್ಯಕ್ತಿಯ ಕಣ್ಣಿಗೆ ಪ್ರಖರವಾಗಿರತಕ್ಕದ್ದಲ್ಲ ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here