ಸಂಡೂರಿನ ನವಲೂಟಿ ಗುಹೆಯಲ್ಲಿ ಆದಿಮಾನವರ ಹೆಜ್ಜೆ ಗುರುತು ಪತ್ತೆ

ಮಂಗಳೂರು (ಬಳ್ಳಾರಿ): ಜಿಲ್ಲೆಯ ಸಂಡೂರಿನ ದಟ್ಟ ಕಾಡಿನ ನಡುವೆ ಇರುವ ನವಲೂಟಿ ಗುಹೆಯಲ್ಲಿ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಈ ನೆಲಗಳಲ್ಲಿ ವಾಸವಾಗಿದ್ದ ಆದಿಮಾನವರು ಬಳಸುತ್ತಿದ್ದ ಶಿಲಾಸಾಧನಗಳ ಪುರಾವೆಗಳು ದೊರಕಿವೆ.

ಗುಹೆಯಲ್ಲಿ ಮಧ್ಯ ಶಿಲಾಯುಗದ ಸಲಕರಣೆಗಳನ್ನು ತಜ್ಞರು ಪತ್ತೆ ಮಾಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕೃತ ಮಾಹಿತಿ ನೀಡಿದ್ದಾರೆ. ಸಂಡೂರು ಪದರ ಶಿಲೆಯ ದಟ್ಟ ಎಲೆಯುದುರುವ ಕಾಡಿನ ಒಂದು ಸಾವಿರ ಚದರ ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಪ್ರಾಗೈತಿಹಾಸಿಕ (ಪ್ರಿಹಿಸ್ಟಾರಿಕ್) ನೆಲೆಗಳು ಇದ್ದವು ಎಂಬ ಸಂಗತಿಯನ್ನು ಇದೀಗ ಪ್ರಾಗೈತಿಹಾಸಿಕ ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ಫೂಟ್ ಸಂಗನಕಲ್ಲು ಪ್ರಿಹಿಸ್ಟಾರಿಕ್ ವಸ್ತುಸಂಗ್ರಹಾಲಯದ ಸದಸ್ಯರು ಹಾಗೂ ಖ್ಯಾತ ಪ್ರಾಗೈತಿಹಾಸಿಕ ತಜ್ಙರಾದ ಡಾ. ರವಿ ಕೋರಿಶೆಟ್ಟರ್, ಡಾ.ಸಮದ್ ಕೊಟ್ಟೂರು ಇವರ ಮಾರ್ಗದರ್ಶನದಲ್ಲಿ ಕಳೆದ ಜೂನ್ ಕೊನೆಯ ವಾರದಲ್ಲಿ ಸಂಶೋಧನೆ ನಡೆದಿತ್ತು. ಮಧ್ಯಶಿಲಾಯುಗದ ಉಪಕರಣಗಳನ್ನು ಹೋಲುವ ಶಿಲಾ ಉಪಕರಣಗಳು ದೊರೆತಿವೆ. ಜತೆಗೆ ದನ ಮತ್ತು ಮೇಕೆಗಳ ಮೂಳೆಗಳ ಪಳೆಯುಳಿಕೆಗಳೂ ದೊರೆತಿವೆ. ಹೆಚ್ಚಿನ ಅಧ್ಯಯನ ಮತ್ತು ವೈಜ್ಞಾನಿಕ ಸಂಶೋಧನೆಯ ಮೂಲಕ ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here