ಮಂಗಳೂರು(ಕಾರವಾರ): ಸೂಪಾ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯ ಭರ್ತಿಯಾಗಲು ಇನ್ನು 14 ಮೀಟರ್ ಮಾತ್ರ ಬಾಕಿ ಇದೆ. ಜಲಾಶಯದಿಂದ ಯಾವುದೇ ಕ್ಷಣ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ ಎಂದು ಕರ್ನಾಟಕ ಪವರ್ ಕಾರ್ಪೊರೇಷನ್ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.
ಸೂಪಾ ಅಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟವು 564.00 ಮೀಟರ ಆಗಿದ್ದು, ಸೂಪಾ ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯವು 147.55 ಟಿ.ಎಂ.ಸಿ ಆಗಿದೆ. ಜಲಾಶಯದ ನೀರಿನ ಮಟ್ಟವು ಜು.29 ರಂದು ಬೆಳಗ್ಗೆ 8 ಗಂಟೆಗೆ 551.60 ಮೀಟರ್ ತಲುಪಿದೆ .ಶೇ. 67.22 ಜಲಾಶಯ ಭರ್ತಿಯಾಗಿದೆ. ಹಾಗೂ 99.175 ಟಿ.ಎಂ.ಸಿ. ನೀರು ಸಂಗ್ರಹ ವಾಗಿರುತ್ತದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ ಶೇ. 67.22 ಆಗಿದ್ದು , ಸೂಪಾ ಜಲಾಶಯದ ಒಳಹರಿವು ಸುಮಾರು 25,997 ಕ್ಯೂಸೆಕ್ಸ್ ಇದ್ದು, ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು.
ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನರು, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಬೇಕೆಂದು ಕೆಪಿಸಿ ಎಂಜಿನಿಯರ್ ಸೂಚಿಸಿದ್ದಾರೆ. ಹಾಗೂ ಸೂಪಾ ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೂ ನಡೆಸದಂತೆ ಸುಫಾ ಅಣೆಕಟ್ಟಿನ ಕಾರ್ಯನಿರ್ವಾಹಕ ಅಭಿಯಂತರು ತಿಳಿಸಿದ್ದಾರೆ.