






ಮಂಗಳೂರು: ನಗರದ ನಂತೂರು ಪದವು-ಜಂಕ್ಷನ್ ನಡುವಿನ ಎನ್ಎಚ್66ನಲ್ಲಿ ಟ್ಯಾಂಕರ್ ಹರಿದು ಸ್ಕೂಟರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರನ್ನು ಮಂಗಳೂರು ನಗರದ ಅಡ್ಯಾರು ಕಣ್ಣಗುಡ್ಡೆ ನಿವಾಸಿ ಶಿವಾನಂದ ಶೆಟ್ಟಿ(42)ಎಂದು ಗುರುತಿಸಲಾಗಿದೆ.ಶಿವಾನಂದ ಶೆಟ್ಟಿ ಅಡ್ಯಾರ್ ಕಣ್ಣೂರಿನಲ್ಲಿ ವಾಚ್‌ಗಳ ಬಿಡಿ ಭಾಗಗಳ ಫ್ಯಾಕ್ಟರಿಯಲ್ಲಿ ಉದ್ಯೋಗಿಯಾಗಿದ್ದು, ಕಾರ್ಯ ನಿಮಿತ್ತ ನಂತೂರು ವೃತ್ತದ ಮೂಲಕ ಕದ್ರಿ ಪದವು ಕಡೆಗೆ ಸ್ಕೂಟರಿನಲ್ಲಿ ಬರುತ್ತಿದ್ದರು.



ಈ ವೇಳೆ ಹಿಂಭಾಗದಿಂದ ಬರುತ್ತಿದ್ದ ಟ್ಯಾಂಕರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸವಾರ ಶಿವಾನಂದ ಶೆಟ್ಟಿ ರಸ್ತೆಗೆಸೆಯಲ್ಪಟ್ಟಿದ್ದು, ಟ್ಯಾಂಕರ್ ಚಕ್ರ ಅವರ ತಲೆಯ ಮೇಲೆ ಹರಿದಿದೆ. ಪರಿಣಾಮ ಶಿವಾನಂದ ಶೆಟ್ಟಿಯವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟ್ಯಾಂಕರ್ ಚಾಲಕನನ್ನು ಬಂಧಿಸಲಾಗಿದೆ.















