ಮಂಗಳೂರು:ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಬೆಳ್ತಂಗಡಿ ಮೂಡಬಿದ್ರಿ ರಾಜ್ಯಹೆದ್ದಾರಿ ಮುಳುಗಡೆಯಾಗಿದ್ದು, 15ಕ್ಕೂ ಹೆಚ್ಚು ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ಮುಂಜಾನೆ ಸಾಧಾರಣ 3 ಗಂಟೆಯ ವರೆಗೂ ಮೂಡಬಿದ್ರಿ ಪೊಲೀಸ್ ಮತ್ತು ಸ್ಥಳೀಯ ಯುವಕರು ಶ್ರಮ ವಹಿಸಿ ಜನರನ್ನು ಸೇರಿದಂತೆ ಜಾನುವಾರುಗಳನ್ನೂ ಸ್ಥಳಾಂತರಿಸಿದ್ದಾರೆ.
ಮೂಡಬಿದ್ರಿ ಪುರಸಭಾ ವ್ಯಾಪ್ತಿಯ ಮಾರೂರು ಗ್ರಾಮದ ದೇವಸ್ಥಾನ ಸುತ್ತಮುತ್ತ ಹಾಗೂ ಮಸೀದಿ ಪಕ್ಕದ ಸುತ್ತಮುತ್ತ ಇರುವ ಹೆಚ್ಚಿನ ಮನೆಗಳಿಗೆ ನೀರು ನುಗ್ಗಿದ್ದು ಅಪಾರ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ವೇಣೂರು ಚರ್ಚ್ ಬಳಿ ನೆರೆ ನೀರಲ್ಲಿ ಸಿಲುಕಿದ ಬಸ್ ಗಳನ್ನು ರಾತ್ರಿ1.30ಕ್ಕೆ ವೇಣೂರು ಪೊಲೀಸರು ಕಾರ್ಯಾಚರಣೆ ನಡೆಸುವ ಮೂಲಕ ದಡ ಸೇರಿಸಿದರು.
ಇನ್ನೊಂದೆಡೆ ಪಾಣೆಮಂಗಳೂರು ಮತ್ತು ಅಮ್ಮುಂಜೆಯ ಹಲವು ತಗ್ಗು ಪ್ರದೇಶ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ.ಬೆಳ್ತಂಗಡಿ ತಾಲೂಕಿನ ಮಾಲಾಡಿ ಸೋಣಂದೂರು ಗ್ರಾಮದ ಮೊದಲೆ ಎಂಬಲ್ಲಿ ಕಿರು ಸೇತುವೆಯೊಂದು ಕುಸಿದಿದೆ.ಮರೋಡಿ ಗ್ರಾಮದ ದೆರಾಜೆಬೆಟ್ಟದ ರಸ್ತೆ ಕುಸಿದಿದೆ.
ನಗರದ ಹೊರವಲಯದ ಗುರುಪುರ ಫಾಲ್ಗುಣಿ ನದಿ ಹರಿವಿನ ಮಟ್ಟದಲ್ಲಿ ಏರಿಕೆಯಾಗಿದ್ದು,ಮೂಡುಶೆಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಅರ್ಬಿ ದಿಡ್ಪೆ ಹೌಸ್ ಸಂಜೀವ್ ಅವರ ಮನೆಗೆ ನೀರು ನುಗ್ಗಿದೆ.ಮಂಗಳೂರು ಪಾಂಡೇಶ್ವರ ಅಗ್ನಿ ಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಕಾರ್ಯಾಚರಣೆ ನಡೆಸಿ ಬೋಟ್ ಮೂಲಕ ಮನೆಯಲ್ಲಿದ್ದವರನ್ನು ಸ್ಥಳಾಂತರಗೊಳಿಸಿದ್ದಾರೆ.
ಅಗ್ನಿ ಶಾಮಕ ದಳದ ಅಧಿಕಾರಿ ಪ್ರವೀಣ್ ಕೆ ಎನ್, ಲೀಡಿಂಗ್ ಫೈಯರ್ ಮ್ಯಾನ್ ಗಿರಿಧರ್, ಸ್ಥಳೀಯ ಪಂಚಾಯತ್ ವಿ.ಎ ಸಂತೋಷ್, ಪಂಚಾಯತ್ ಅಧ್ಯಕ್ಷ ಅನೀಲ್, ಸ್ಥಳೀಯ ಪಂಚಾಯತ್ ಸದಸ್ಯರಾದ ಕಿರಣ್ ಶೆಟ್ಟಿ, ಸುಕೇಶ್ ಕೊಟ್ಟಾರಿ, ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.