ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ್ದ ಇಬ್ಬರ ವಿರುದ್ಧ ಎನ್​​ಐಎ ಚಾರ್ಜ್​​ಶೀಟ್​​

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಬಿಜೆಪಿ ಯುವ ಮುಂಖಡ ಪ್ರವೀಣ್ ನೆಟ್ಟಾರು ಎಂಬಾತನ ಹತ್ಯೆಗೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿದ್ದ ಇಬ್ಬರು ಆರೋಪಿಗಳಾದ ಮನ್ಸೂರ್ ಪಾಷಾ ಹಾಗೂ ರಿಯಾಜ್ ಹೆಚ್.ವೈ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್​ಶೀಟ್​ ಸಲ್ಲಿಸಿದೆ.
ಎನ್ಐಎ ಅಧಿಕಾರಿಗಳು ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಸಂಚುಕೋರ ಹಾಗೂ ರಾಜ್ಯದಲ್ಲಿ ಪಿಎಫ್‌ಐ ಸಂಘಟನೆಯ ಮಾಸ್ಟರ್ ಟ್ರೈನರ್ ಆಗಿದ್ದ ಆರೋಪಿ ಮುಸ್ತಫಾ ಪೈಚಾರ್ ಹಾಗೂ ಆತನಿಗೆ ನೆರವು ನೀಡಿದ್ದ ಮನ್ಸೂರ್ ಪಾಷಾನನ್ನು ಮೇ 10ರಂದು ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬಂಧಿಸಿದ್ದರು. ವಿದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ರಿಯಾಜ್​ ನನ್ನು ಜೂ.3ರಂದು ಮುಂಬೈ ಏರ್​​ಪೋರ್ಟ್​ನಲ್ಲಿ ಬಂಧಿಸಲಾಗಿತ್ತು.

ಪ್ರವೀಣ್ ನೆಟ್ಟಾರು ಕೊಲೆ ಕೇಸ್​ನಲ್ಲಿ ಇದುವರೆಗೆ ಎನ್​ಐಎ 21 ಆರೋಪಿಗಳ ವಿರುದ್ದ ಚಾರ್ಜ್‌ ಶೀಟ್ ಸಲ್ಲಿಸಿದೆ. ಈ ಇಬ್ಬರು ಆರೋಪಿಗಳ ಪಾತ್ರದ ಕುರಿತು ಐಪಿಸಿಯ ಸೆಕ್ಷನ್ 120 ಬಿ ಮತ್ತು 212 ಮತ್ತು ಯುಎ (ಪಿ) ಆ್ಯಕ್ಟ್‌ನ ಸೆಕ್ಷನ್ 19ರ ಆಧಾರದಲ್ಲಿ ತಕ್ಷಣ ಪ್ರಕರಣ ದಾಖಲಿಸಿದ ಎನ್ಐಎ ಇಬ್ಬರ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದೆ. ಉಳಿದ ಏಳು ಜನ ಆರೋಪಿಗಳಿಗಾಗಿ ಪತ್ತೆ ಕಾರ್ಯ ಮುಂದುವರೆದಿದೆ.

LEAVE A REPLY

Please enter your comment!
Please enter your name here